ಪುಣೆ: ಭಾರತ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ಗಾಯಗೊಂಡ ಹಿನ್ನೆಲೆ ಅವಕಾಶ ಪಡೆದಿದ್ದ ಉಮೇಶ್ ಯಾದವ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಸ್ಥಾನ ಬದ್ರಪಡಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ನಂತರ ಬೆನ್ನುನೋವಿಗೆ ತುತ್ತಾಗಿರುವ ವೇಗಿ ಜಸ್ಪ್ರಿತ್ ಬೂಮ್ರಾ ಜಾಗಕ್ಕೆ ಉಮೇಶ್ ಆಯ್ಕೆಯಾಗಿದ್ದರು. ಮೊದಲ ಟೆಸ್ಟ್ನಲ್ಲಿ ಬೆಂಚ್ ಕಾದಿದ್ದ ಅವರು ಎರಡನೇ ಟೆಸ್ಟ್ನಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡರಲ್ಲದೆ ಎರಡೂ ಇನ್ನಿಂಗ್ಸ್ನಲ್ಲೂ ತಲಾ ಮೂರು ವಿಕೆಟ್ ಪಡೆದು ಕೊಹ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ.
ಪಂದ್ಯ ಗೆಲುವಿನ ಬಳಿಕ ಮಾತನಾಡಿದ ಉಮೇಶ್, ಈ ಪಂದ್ಯದಲ್ಲಿ ನಾನು ಪಡೆದ ವಿಕೆಟ್ ಸಹಾಗೆ ಸಲ್ಲಬೇಕು, ಆ ಎರಡು ಎಸೆತಗಳೂ ಬೌಂಡರಿ ಸೇರುತ್ತವೆ ಎಂದುಕೊಂಡಿದ್ದೆ, ಅದೃಷ್ಟವಶಾತ್ ಸಹಾ ಅದ್ಭುತವಾಗಿ ಜಂಪ್ ಮಾಡಿ ಕ್ಯಾಚ್ ಪಡೆದರು ಎಂದು ಸಹಾ ವಿಕೆಟ್ ಕೀಪಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲೆ ಅವರಿಗೆ ಟ್ರೀಟ್ ಕೊಡಿಸುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ..
ಇನ್ನು, ತಂಡದಲ್ಲಿ ಅವಕಾಶ ಸಿಕ್ಕಬಗ್ಗೆ ಮಾತನಾಡಿ, ತಂಡದಲ್ಲಿ ಆರೋಗ್ಯಕರ ಸ್ಪರ್ಧೆಯಿದೆ. ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ನಾನು ನನಗೆ ಸಿಕ್ಕ ಅವಕಾಶಗಳಲ್ಲಿ ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಾಗೂ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಬಯಸುತ್ತೇನೆ. ಭಾರತದ ಪಿಚ್ಗಳಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡುವ ಆತ್ಮವಿಶ್ವಾಸವಿತ್ತು. ಯಾಕೆಂದರೆ, ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 10 ವಿಕೆಟ್ ಪಡೆದಿದ್ದೆ. ಅದೇ ಆತ್ಮವಿಶ್ವಾಸದಲ್ಲಿ ಬೌಲಿಂಗ್ ಮಾಡಿ ಯಶಸ್ವಿಯಾದೆ ಎಂದು ಯಾದವ್ ತಿಳಿಸಿದ್ದಾರೆ.