ಲಂಡನ್: ವಿಶ್ವಕಪ್ಗಾಗಿ ಪ್ರಾಥಮಿಕ ತಂಡ ಘೋಷಣೆ ಮಾಡಿಕೊಂಡಿದ್ದ ಎಲ್ಲಾ ದೇಶಗಳ ಕ್ರಿಕೆಟ್ ಬೋರ್ಡುಗಳು ಅಂತಿಮ ಹಂತದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದವು. ಈ ಬದಲಾವಣೆಯಲ್ಲಿ ತಂಡಕ್ಕೆ ಆಯ್ಕೆಯಾಗಿ ಬಂದ ಆಟಗಾರರು ಇದೀಗ ವಿಶ್ವಕಪ್‌ನಲ್ಲಿ ಮಿಂಚು ಹರಿಸುತ್ತಿದ್ದಾರೆ.
ಮೇ 23 ರಂದು ಅಂತಿಮ ಹಂತದ ತಂಡ ಪ್ರಕಟಿಸಿದ ಪಾಕಿಸ್ತಾನ ಅಮೀರ್ಗೆ, ಇಂಗ್ಲೆಂಡ್ ತಂಡ ಜೋಫ್ರಾ ಆರ್ಚರ್ಗೆ ಹಾಗೂ ದಕ್ಷಿಣ ಆಫ್ರಿಕಾ ತಂಡ ಕ್ರಿಸ್ ಮೋರಿಸ್ಗೆ ತಂಡದಲ್ಲಿ ಅವಕಾಶ ನೀಡಿತ್ತು. ಇದೀಗ ಈ ಮೂವರೂ ತಮ್ಮ ತಂಡಗಳ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳಾಗಿದ್ದಾರೆ.
ಮೊಹಮ್ಮದ್ ಅಮೀರ್
ಏಪ್ರಿಲ್ 15 ರಂದು ತನ್ನ 15 ಸದಸ್ಯರ ತಂಡ ಪ್ರಕಟಿಸಿದ್ದ ಪಾಕಿಸ್ತಾನ ಆಯ್ಕೆ ಸಮಿತಿ ವೇಗಿ ಮೊಹಮ್ಮದ್ ಅಮೀರ್ರನ್ನು ಕೈಬಿಟ್ಟಿತ್ತು. ಆಫ್ರಿದಿ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅಮೀರ್ ಕೈಬಿಟ್ಟಿದ್ದನ್ನು ಟೀಕಿಸಿದ್ದರು.
ಆದರೆ ಮೇ 23 ರಂದು ಅಂತಿಮ ತಂಡ ಪ್ರಕಟಿಸಿದ ಪಾಕ್ ತಂಡ ಅಮೀರ್ಗೆ ಅವಕಾಶ ನೀಡಿತ್ತು. ಇದೀಗ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರ ಹೆಚ್ಚು ವಿಕೆಟ್ ಪಡೆಯುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಮೀರ್ 4 ಇನ್ನಿಂಗ್ಸ್ನಲ್ಲಿ 13 ವಿಕೆಟ್ ಪಡೆದು ಮಿಂಚಿದ್ದಾರೆ.
ಜೋಫ್ರಾ ಆರ್ಚರ್
ಇಂಗ್ಲೆಂಡ್ ತಂಡದ ಪರ ವಿಶ್ವಕಪ್ ಆಡುವ ಕನಸು ಕಂಡಿದ್ದ ಆರ್ಚರ್ಗೆ ಇಂಗ್ಲೆಂಡ್ ಆಯ್ಕೆ ಸಮಿತಿ ತನ್ನ ಪ್ರಾಥಮಿಕ ತಂಡದಲ್ಲಿ ಅವಕಾಶ ನೀಡಿರಲಿಲ್ಲ. ಆದರೆ ಅಂತಿಮ ಹಂತದ ತಂಡ ಪ್ರಕಟಿಸುವ ವೇಳೆ ಡೇವಿಡ್ ವಿಲ್ಲೆ ಬದಲಿಗೆ ಆರ್ಚರ್ಗೆ ಅವಕಾಶ ನೀಡಿತ್ತು. ಇದೀಗ ಜೋಫ್ರಾ ಆರ್ಚರ್ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆರ್ಚರ್ 6 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾ ವಿರುದ್ಧದ ಪಂದ್ಯದಲ್ಲಿ ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲೂ 3 ವಿಕೆಟ್ ಪಡೆದಿದ್ದಾರೆ.
ಕ್ರಿಸ್ ಮೋರಿಸ್
ದಕ್ಷಿಣ ಆಫ್ರಿಕಾ ತಂಡವೂ ಕೂಡ ತನ್ನ ಮೊದಲ ಆಯ್ಕೆಯಲ್ಲಿ ಕ್ರಿಸ್ ಮೋರಿಸ್ರನ್ನು ಆಯ್ಕೆ ಮಾಡಿರಲಿಲ್ಲ. ಆದರೆ ವೇಗಿ ಆನ್ರಿಚ್ ನರ್ಟ್ಜೆ ಗಾಯಗೊಂಡ ಹಿನ್ನಲೆ ಮೋರಿಸ್ಗೆ ಅವಕಾಶ ನೀಡಲಾಗಿತ್ತು. ಇದೀಗ ಮೋರಿಸ್ 6 ಪಂದ್ಯಗಳಿಂದ 9 ವಿಕೆಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಹೀಗೆ ಆಯ್ಕೆ ಸಮಿತಿಯ ತಿರಸ್ಕಾರಕ್ಕೊಳಗಾದವರೇ ಇಂದು ಆ ತಂಡಕ್ಕೆ ಆಧಾರ ಸ್ಥಂಭಗಳಾಗಿ ವಿಶ್ವಕಪ್‌ನಲ್ಲಿ ಮಿಂಚುತ್ತಿದ್ದಾರೆ. ಅಮೀರ್ ಹಾಗೂ ಮೋರಿಸ್ಗೆ ಇತರೆ ಬೌಲರ್ಗಳ ಬೆಂಬಲ ದೊರೆಯದಿದ್ದರಿಂದ ವಿಶ್ವಕಪ್‌ನಲ್ಲಿ ದ.ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳು ಯಶ ಕಾಣಲಿಲ್ಲ. ಆದರೆ ಜೋಫ್ರಾ ಆರ್ಚರ್ ಮಾತ್ರ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.