ಹೈದರಾಬಾದ್: 2020 ಮುಕ್ತಾಯಗೊಂಡು ಜಗತ್ತು 2021ಕ್ಕೆ ಕಾಲಿಟ್ಟಿದೆ. ಕೊರೊನಾ ಕಾರಣ ಕ್ರೀಡಾಭಿಮಾನಿಗಳಿಗೆ ಕಳೆದ ವರ್ಷ ಹೇಳಿಕೊಳ್ಳುವಂತಹ ಮನೋರಂಜನೆ ಸಿಕ್ಕಿಲ್ಲ. ಹೊಸ ವರ್ಷ ಕಹಿ ನೆನಪುಗಳನ್ನು ಅಳಿಸಿ ಹಾಕುವ ಭರವಸೆ ನೀಡುತ್ತಿದೆ. ಇದರ ಮಧ್ಯೆ ಹೊಸ ವರ್ಷದಲ್ಲಿ ಟೀಂ ಇಂಡಿಯಾ ಆಡಲಿರುವ ಕ್ರಿಕೆಟ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
2021ರಲ್ಲಿ ಭಾರತ ಆಡಲಿರುವ ಕ್ರಿಕೆಟ್ ಟೂರ್ನಿಗಳ ವಿವರ:
- ಭಾರತ vs ಆಸ್ಟ್ರೇಲಿಯಾ (ಜನವರಿ): ಕಾಂಗರೂ ನಾಡಿನಲ್ಲಿ ಟೀಂ ಇಂಡಿಯಾ ಈಗಾಗಲೇ ಉಳಿದುಕೊಂಡಿದ್ದು, ಇದೇ ತಿಂಗಳಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲಿದೆ. ಈಗಾಗಲೇ ಮುಕ್ತಾಯಗೊಂಡಿರುವ ಟೆಸ್ಟ್ ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 1ರಲ್ಲಿ ಗೆಲುವು ದಾಖಲಿಸಿವೆ. ಜನವರಿ 7ರಿಂದ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಆರಂಭಗೊಳ್ಳಲಿದೆ.ಟೀಂ ಇಂಡಿಯಾ ಟೆಸ್ಟ್ ತಂಡ
- ಭಾರತ- ಇಂಗ್ಲೆಂಡ್ ಸರಣಿ(ಫೆಬ್ರವರಿ- ಮಾರ್ಚ್): ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಕ್ತಾಯಗೊಳ್ಳುತ್ತಿದ್ದಂತೆ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಸೆಣಸಾಟ ನಡೆಸಲು ಸಜ್ಜುಗೊಳ್ಳಲಿದೆ. ನಾಲ್ಕು ಟೆಸ್ಟ್ ಪಂದ್ಯ, ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳಲ್ಲಿ ಉಭಯ ತಂಡಗಳು ಭಾಗಿಯಾಗಲಿವೆ.
- ಇಂಡಿಯನ್ ಪ್ರೀಮಿಯರ್ ಲೀಗ್ (ಏಪ್ರಿಲ್-ಮೇ): ಮುಂದಿನ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಏಪ್ರಿಲ್ ತಿಂಗಳಿಂದ ಮೇ ವರೆಗೆ ನಡೆಯಲಿದೆ. ಕೊರೊನಾ ಮಹಾಮಾರಿ ಕಾರಣ ಕಳೆದ ವರ್ಷದ ಐಪಿಎಲ್ ದುಬೈನಲ್ಲಿ ಆಯೋಜನೆಗೊಂಡಿತ್ತು. ಆದರೆ ಸದ್ಯ ಕೊರೊನಾ ವೈರಸ್ ಹತೋಟಿಯಲ್ಲಿರುವ ಕಾರಣ ಭಾರತದಲ್ಲಿ ಈ ವರ್ಷದ ಟೂರ್ನಿ ನಡೆಯಲಿದೆ.
- ಭಾರತ-ಶ್ರೀಲಂಕಾ ಸರಣಿ ಹಾಗೂ ಏಷ್ಯಾ ಕಪ್( ಜೂನ್-ಜುಲೈ): ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಳ್ಳುತ್ತಿದ್ದಂತೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಮೂರು ಏಕದಿನ ಪಂದ್ಯ ಹಾಗೂ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದೇ ವೇಳೆ ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವ ಏಷ್ಯಾಕಪ್ನಲ್ಲಿ ಭಾರತ ಭಾಗಿಯಾಗಲಿದೆ. ಇದರಲ್ಲಿ ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ಏಷ್ಯಾದ ಎಲ್ಲ ಕ್ರಿಕೆಟ್ ತಂಡಗಳು ಭಾಗಿಯಾಗಲಿವೆ
- ಭಾರತ-ಜಿಂಬಾಬ್ವೆ (ಜುಲೈ): ಶ್ರೀಲಂಕಾ ಪ್ರವಾಸದ ಬಳಿಕ ಭಾರತ ಜಿಂಬಾಬ್ವೆ ತಂಡದ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದೆ. ಈ ವೇಳಾಪಟ್ಟಿ 2020ರಲ್ಲೇ ಆಯೋಜನೆಗೊಂಡಿತ್ತು. ಕೊರೊನಾ ವೈರಸ್ ಕಾರಣ ಮುಂದೂಡಿಕೆಯಾಗಿದ್ದು, ಭಾರತ ನಿಗದಿತ ಓವರ್ಗಳ ಸರಣಿಯಲ್ಲಿ ಜಿಂಬಾಬ್ವೆ ಎದುರಿಸಲಿದೆ.
- ಭಾರತ-ಇಂಗ್ಲೆಂಡ್ ಸರಣಿ(ಆಗಸ್ಟ್-ಸೆಪ್ಟೆಂಬರ್): ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಭಾರತಕ್ಕೆ ಇದು ಅತಿದೊಡ್ಡ ಸವಾಲು ಆಗಲಿದೆ.ಟೀಂ ಇಂಡಿಯಾ ಕ್ರಿಕೆಟ್ ತಂಡ
- ಭಾರತ- ದಕ್ಷಿಣ ಆಫ್ರಿಕಾ ಸರಣಿ (ಅಕ್ಟೋಬರ್): ಐಸಿಸಿ ಟಿ-20 ವಿಶ್ವಕಪ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲಿದೆ.
- ಐಸಿಸಿ ಟಿ-20 ವಿಶ್ವಕಪ್ (ಅಕ್ಟೋಬರ್): ಭಾರತದಲ್ಲಿ ಮಹತ್ವದ ಟಿ-20 ವಿಶ್ವಕಪ್ ನಡೆಯಲಿದ್ದು, ಎಲ್ಲ ಕ್ರಿಕೆಟ್ ತಂಡಗಳು ಇದರಲ್ಲಿ ಭಾಗಿಯಾಗಲಿವೆ.
- ಭಾರತ-ನ್ಯೂಜಿಲ್ಯಾಂಡ್ ಸರಣಿ (ನವೆಂಬರ್-ಡಿಸೆಂಬರ್): ಟಿ-20 ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದೆ. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಈ ಸರಣಿ ನಡೆಯಲಿದೆ.
- ಭಾರತ-ದಕ್ಷಿಣ ಆಫ್ರಿಕಾ ಸರಣಿ(ಡಿಸೆಂಬರ್): 2021ರ ವರ್ಷದ ಕೊನೆಯಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದ್ದು, ಇಲ್ಲಿ ಮೂರು ಟೆಸ್ಟ್ ಪಂದ್ಯ ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿವೆ.