ಸೌತಮ್ಟನ್: ಒಂದು ಕಡೆ ಗಾಯ, ಮತ್ತೊಂದು ಕಡೆ ಸತತ ಸೋಲಿನಿಂದ ಕಂಗೆಟ್ಟಿರುವ ದ.ಆಫ್ರಿಕಾ ವಿರುದ್ಧ ಭಾರತ ತಂಡದ ಇಂದು ವಿಶ್ವಕಪ್ನಲ್ಲಿ ತನ್ನ ಮೊದಲ ಪಂದ್ಯವಾಡಲು ತಯಾರಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹಾಗೂ ಎರಡನೇ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಸೋಲು ಕಂಡಿರುವ ದ.ಆಫ್ರಿಕಾ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಭುಜದ ನೋವಿಗೆ ತುತ್ತಾಗಿದ್ದ ಡೇಲ್ಸ್ಟೈನ್ ಟೂರ್ನಿಯಿಂದಲೇ ಹೊರಬಿದ್ದಿರುವುದು ಹರಿಣಗಳಿಗೆ ಆಘಾತ ನೀಡಿದೆ. ಇನ್ನು ಕಳೆದ ಪಂದ್ಯದಲ್ಲಿ ಮಂಡಿರಜ್ಜು ನೋವಿಗೆ ತುತ್ತಾಗಿರುವ ಲುಂಗಿ ಎನ್ಗಿಡಿ ಕೂಡ 10 ದಿನಗಳ ಕಾಲ ಮೈದಾನದಿಂದ ಹೊರಗುಳಿಯಬೇಕಿದೆ. ಇವೆಲ್ಲದರ ನಡುವೆ ಇಂದು ಎದುರಾಗುತ್ತಿರುವುದು ಬಲಿಷ್ಠ ಭಾರತದೆದುರು ಎಂಬ ಚಿಂತೆ ಕೂಡ ಪ್ಲೆಸಿಸ್ ಪಡೆಯನ್ನು ಕಾಡತೊಡಗಿದೆ.
ಇನ್ನು ಈ ವಿಶ್ವಕಪ್ನಲ್ಲಿ ತನ್ನ ಮೊದಲ ಪಂದ್ಯವಾಡುತ್ತಿರುವ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ ಸುಲಭದ ಜಯ ನಿರೀಕ್ಷೆಯಲ್ಲಿದೆ. ಆರಂಭಿಕರಾಗಿ ರೋಹಿತ್, ಧವನ್, ಕೊಹ್ಲಿ ಕಣಕ್ಕಿಳಿಯುತ್ತಿದ್ದರೆ, ರಾಹುಲ್, ಕೇದಾರ್ ಜಾಧವ್ ಹಾಗೂ ವಿಜಯ್ ಶಂಕರ್ ನಡುವೆ ನಾಲ್ಕನೇ ಸ್ಥಾನಕ್ಕೆ ಪೈಪೋಟಿಯಿದೆ. ಇವರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಬಹುದು. ಧೋನಿ, ಹಾರ್ದಿಕ್ ಪಾಂಡ್ಯ 5 ಮತ್ತು 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ದ.ಆಫ್ರಿಕಾ ಸ್ಪಿನ್ನರ್ಗಳಿಗೆ ಆಡಲು ತಿಣುಕಾಡುತ್ತಿರುವುದರಿಂದ ಮೂವರು ಸ್ಪಿನ್ನರ್ಗಳೊಂದಿಗೆ ಬುಮ್ರಾ, ಭುವಿ ವೇಗದ ಬೌಲಿಂಗ್ ವಿಭಾಗದಿಂದ ಕಣಕ್ಕಿಳಿಯಲಿದ್ದಾರೆ.
ಮುಖಾಮುಖಿ:
ಭಾರತ ತಂಡ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳಲ್ಲಿ 3ರಲ್ಲಿ ಸೋಲನುಭವಿಸಿದೆ. ಒಂದರಲ್ಲಿ ಜಯ ಸಾಧಿಸಿದೆ. 2015ರ ವಿಶ್ವಕಪ್ನಲ್ಲಿ ಭಾರತ ತಂಡ 130 ರನ್ಗಳ ಜಯ ಸಾಧಿಸಿತ್ತು.
83 ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ 46 ಪಂದ್ಯಗಳಲ್ಲಿ, ಭಾರತ 34 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಭಾರತ ತಂಡ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್.ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ದಕ್ಷಿಣ ಆಫ್ರಿಕಾ
ಫಾಫ್ ಡುಪ್ಲೆಸಿ (ನಾಯಕ), ಹಾಸಿಮ್ ಆಮ್ಲ, ಐಡೆನ್ ಮ್ಯಾರ್ಕ್ರಮ್, ಕ್ವಿಂಟನ್ ಡಿ ಕಾಕ್, ರಾಸ್ಸೀ ವ್ಯಾನ್ ಡೇರ್ ಡಸ್ಸನ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಆಂಡೈಲ್ ಫೆಹ್ಲುಕ್ವಾಯೋ, ಜೆಪಿ ಡುಮಿನಿ, ಡ್ವೇನ್ ಪ್ರಿಟೋರಿಯಸ್, ಕಾಗಿಸೋ ರಬಾಡಾ, ಇಮ್ರಾನ್ ತಾಹೀರ್