ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದಡಿ ಬಿಜೆಪಿ ನಾಯಕ ಸಿ.ಟಿ. ರವಿ ಅವರ ಬಂಧನ ಖಂಡಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಭೈರತಿ ಬಸವರಾಜ್, ಅಶ್ವತ್ಥನಾರಾಯಣ, ಹರೀಶ್ ಪೂಂಜಾ, ಧೀರಜ್ ಮುನಿರಾಜ್, ಮಾಜಿ ಉಪ ಮೇಯರ್ ಹರೀಶ್ ಸೇರಿದಂತೆ ಹಲವು ಬಿಜೆಪಿ ಶಾಸಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, "ಸಿ.ಟಿ.ರವಿಯವರು ಏನು ಮಾತನಾಡಿಲ್ಲ ಎಂದು ಸಭಾಪತಿಗಳೇ ಹೇಳಿದ್ದಾರೆ. ಸದನದ ಒಳಗೆ ನಡೆದಿರುವುದಕ್ಕೆ ಸಭಾನಾಯಕರೇ ತೀರ್ಮಾನ ತೆಗೆದು ಕೊಳ್ಳಬೇಕು. ಆದರೆ, ಸಭಾನಾಯಕರ ಅನುಮತಿಯಿಲ್ಲದೆ, ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ. ಮೂಲಕ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ'' ಎಂದು ಆರೋಪಿಸಿದರು.
ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಇದೆ: ಪಕ್ಷದ ನಾಯಕ ಸಿ.ಟಿ.ರವಿ ಅವರನ್ನು ಏಕಾಏಕಿ ಬಂಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಅಶ್ವತ್ಥನಾರಾಯಣ, ''ಆರೋಪದ ಕುರಿತು ವಿಧಾಮ ಪರಿಷತ್ತಿನಲ್ಲಿ ಸಭಾಪತಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಕೂಡಾ ಕಾಂಗ್ರೆಸ್‌ನವರು ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ದೂರು ಪಡೆದ ಮೇಲೆ ತನಿಖೆ ಮಾಡಬೇಕಿತ್ತು. ಅಲ್ಲದೇ ಸಿ.ಟಿ.ರವಿಯವರು ಕೊಟ್ಟ ಪ್ರತಿದೂರನ್ನು ಪರಿಗಣಿಸಿಲ್ಲ. ಕೇವಲ ಪೋಸ್ಟಿಂಗ್ಗಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಇದೆ. ಸುವರ್ಣಸೌಧದಲ್ಲಿ ರೌಡಿಗಳು ಬಂದು ಸಿ.ಟಿ.ರವಿಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದರೆ ಸುವರ್ಣಸೌಧಕ್ಕೆ ಭದ್ರತೆ ಕೊಡುವ ಯೋಗ್ಯತೆ ಕಾಂಗ್ರೆಸ್‌ನವರಿಗಿಲ್ಲ, ಇನ್ನು ಇಡೀ ರಾಜ್ಯಕ್ಕೆ ಭದ್ರತೆ ಹೇಗೆ ಕೊಡುತ್ತಾರೆ'' ಎಂದು ಪ್ರಶ್ನಿಸಿದರು.
ಮಹಿಳಾ ಕಾಂಗ್ರೆಸ್ ಪ್ರತಿಭಟನೆ: ಮತ್ತೊಂದೆಡೆ, ಸಿ.ಟಿ.ರವಿ ವಿರುದ್ಧ ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಸಹ ಪ್ರತಿಭಟನೆ ನಡೆಸಿದೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಹಲವು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಬಳಿ ಪ್ರತಿಭಟಿಸಿದರು. ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತೆಯರು ಬಿಜೆಪಿ ಕಚೇರಿಯತ್ತ ಮುನ್ನುಗ್ಗುತ್ತಿದ್ದಂತೆ ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದರು.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಅವಾಚ್ಯ ಪದ ಬಳಕೆ ಖಂಡಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಮಾನಿ ಬಳಗ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೇಶ್ವಾಪೂರ ಸರ್ಕಲ್ನಲ್ಲಿ ಅಭಿಮಾನಿ ಬಳಗದಿಂದ ಪ್ರತಿಭಟನೆ ನಡೆಸಲಾಯಿತು. ಲಕ್ಷ್ಮಿ ಹೆಬ್ಬಾಳ್ಕರ್ ಪರ ಭಿತ್ತಿ ಪತ್ರಗಳೊಂದಿಗೆ ರಸ್ತೆ ತಡೆದು, ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದರು.
ಮತ್ತೊಂದೆಡೆ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು. ಸಿ.ಟಿ.ರವಿ ಅವರ ಭಾವಚಿತ್ರಕ್ಕೆ ಹೂ ಹಾಕಿ, ಬಾಳೆಹಣ್ಣು, ನಿಂಬೆಹಣ್ಣು ಇಟ್ಟು ಪೂಜೆ ಸಲ್ಲಿಸಿ ಧಿಕ್ಕಾರ ಕೂಗಿದರು.