ಮುಂಬೈ: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಕೆರಿಬಿಯನ್ ಪ್ರವಾಸದಲ್ಲಿದ್ದು, ವೆಸ್ಟ್ ಇಂಡೀಸ್ ತಂಡದೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದೆ. ಈ ವೇಳೆ ಟೀಂ ಇಂಡಿಯಾ ತಂಡದ ಮ್ಯಾನೇಜರ್ ಸುನಿಲ್ ಸುಬ್ರಮಣಿಯಂ ಟ್ರಿನಿಡಾಡ್ ಹಾಗೂ ಟೊಬೇಗೋಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಟೀಂ ಇಂಡಿಯಾ ಜಲ ಸಂರಕ್ಷಣೆ ಕುರಿತು ಸಣ್ಣ ಜಾಹೀರಾತು ಮಾಡಬೇಕಾಗಿತ್ತು. ಪ್ಲೇಯರ್ ವೇಳಾಪಟ್ಟಿ ನೋಡಿಕೊಂಡು ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲು ಟೀಂ ಇಂಡಿಯಾ ಮ್ಯಾನೇಜರ್ ಸುನಿಲ್ರನ್ನು ಸಂಪರ್ಕಿಸುವಂತೆ ಅಲ್ಲಿನ ರಾಯಭಾರ ಕಚೇರಿಗೆ ಬಿಸಿಸಿಐ ತಿಳಿಸಿತ್ತು. ಈ ವೇಳೆ ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳು ಕರೆ ಮಾಡಿದಾಗ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ತಕ್ಷಣವೇ ಭಾರತಕ್ಕೆ ಮರಳುವಂತೆ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ವೆಸ್ಟ್ ಇಂಡೀಸ್ ಪ್ರವಾಸ ಮುಕ್ತಾಯಗೊಳ್ಳುತ್ತಿದ್ದಂತೆ ಸುನಿಲ್ ಅವರ ಅಧಿಕಾರವಧಿ ಮುಕ್ತಾಯಗೊಳ್ಳಲಿದ್ದು, ಮತ್ತೊಂದು ಅವಧಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. 52 ವರ್ಷದ ಸುಬ್ರಮಣಿಯಂ ಟೀಂ ಇಂಡಿಯಾ ಆಲ್ರೌಂಡರ್ ಆರ್ ಅಶ್ವಿನ್ ಅವರ ಕೋಚ್ ಎಂಬುದು ವಿಶೇಷ. 74 ಮೊದಲ ದರ್ಜೆ ಕ್ರಿಕೆಟ್ ಆಡಿರುವ ಇವರು 285 ವಿಕೆಟ್ ಪಡೆದುಕೊಂಡಿದ್ದಾರೆ.