ಬ್ರಿಸ್ಬೇನ್: ಆಶ್ಲೀ ಗಾರ್ಡ್ನರ್ ಹಾಗೂ ಮೆಗನ್ ಶುಟ್ ಅವರ ಅದ್ಭುತ ಪ್ರದರ್ಶನದ ನೆರವಿನಿದ ಆಸ್ಟ್ರೇಲಿಯಾ ಮಹಿಳಾ ತಂಡ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ಮಹಿಳಾ ತಂಡವನ್ನು 17 ರನ್ಗಳಿಂದ ಮಣಿಸಿದೆ.
2020 ರ ಟಿ-20 ವಿಶ್ವಕಪ್ ಸರಣಿಯ ಫೈನಲ್ ಪಂದ್ಯದ ಬಳಿಕ ಮಹಿಳಾ ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಪುನಾರಂಭಗೊಂಡಿತು. ಇಂದು ನಡೆದ ಮೊದಲ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ಪ್ರಬಲ ಬೌಲಿಂಗ್ ದಾಳಿಯ ನೆರವಿನಿಂದ ಕಿವೀಸ್ ಮಹಿಳಾ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ವಿಶ್ವದ ನಂಬರ್ ಒನ್ ಆಟಗಾರ್ತಿ ಮೂನಿಯನ್ನು(2) ಹಾಗೂ ಅಲಿಸ್ಸಾ ಹೀಲಿ(6)ಯನ್ನು ಪವರ್ ಪ್ಲೇಯೊಳಗೆ ಕಳೆದುಕೊಂಡಿತು. ನಂತರ ಬಂದ ನಾಯಕಿ ಲ್ಯಾನಿಂಗ್ 26 ಹಾಗೂ ಹೇನ್ಸ್ 23 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಇನ್ನಿಂಗ್ಸ್ನ ಕೊನೆಯ ಓವರ್ಗಳಲ್ಲಿ ಅಬ್ಬರಿಸಿದ ಆ್ಯಶ್ಲೀ ಗಾರ್ಡ್ನರ್ ಕೇವಲ 41 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 51 ರನ್ಗಳಿಸುವ ಮೂಲಕ 138 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಕಿವೀಸ್ ಪರ ನಾಯಕ ಸೋಫಿ ಡಿವೈನ್ 18 ರನ್ ನೀಡಿ 3 ವಿಕೆಟ್ ಪಡೆದರು. ಸೂಜೀ ಬೇಟ್ಸ್, ತಹುಹು ಹಾಗೂ ಆರ್. ಮೈರ್ ತಲಾ ಒಂದು ವಿಕೆಟ್ ಪಡೆದರು.
138 ರನ್ಗಳ ಗುರಿ ಪಡೆದ ನ್ಯೂಜಿಲ್ಯಾಂಡ್ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 121 ರನ್ಗಳಿಗೆ ತೃಪ್ತಿ ಪಟ್ಟುಕೊಂಡಿತು.
ಸೂಜೀ ಬೇಟ್ಸ್ 33, ಮಾರ್ಟಿನ್ 21 ಹಾಗೂ ನಾಯಕಿ ಡಿವೈನ್ 29 ರನ್ಗಳಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾದ ವೇಗಿ ಮೆಗನ್ ಶುಟ್ ಕೇವಲ 23 ರನ್ ನೀಡಿ 4 ವಿಕೆಟ್ ಪಡೆದರು. ಇವರಿಗೆ ಬೆಂಬಲ ನೀಡಿದ ಕಿಮ್ಮಿನ್ಸ್ 24 ರನ್ ನೀಡಿ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.