ಬೆಂಗಳೂರು : ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 2ನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ 9 ವಿಕೆಟ್ಗಳ ಹೀನಾಯ ಸೋಲು ಕಂಡಿದೆ.
ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಕರ್ನಾಟಕ ತಂಡ ಸಿದ್ಧಾರ್ಥ್ ಕೌಲ್ ದಾಳಿಗೆ ಸಿಲುಕಿ ಕೇವಲ 125 ರನ್ ಗಳಿಸಿತ್ತು. ರೋಹನ್ ಕಡಂ 32 ರನ್ ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್ ಆಯಿತು.
126 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ ಪ್ರಭಸಿಮ್ರಾನ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 14.4 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 52 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ಗಳ ಸಹಿತ 89 ರನ್ಗಳಿಸಿ ಸುಲಭ ಜಯಕ್ಕೆ ಕಾರಣರಾದರು. ಅಭಿಷೇಕ್ ಶರ್ಮಾ 30 ರನ್ ಗಳಿಸಿದರು.
ಸಿದ್ದಾರ್ಥ್ ಕೌಲ್ ಹ್ಯಾಟ್ರಿಕ್ : 104ಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಎದುರು ನೋಡುತ್ತಿದ್ದ ಕರ್ನಾಟಕ ತಂಡಕ್ಕೆ ಪಂಜಾಬ್ ತಂಡದ ಅನುಭವಿ ಬೌಲರ್ ಸಿದ್ದಾರ್ಥ್ ಕೌಲ್ 17ನೇ ಓವರ್ನಲ್ಲಿ ಆಘಾತ ನೀಡಿದರು.
ಅವರು ಆ ಓವರ್ನ 3,4 ಮತ್ತು 5ನೇ ಎಸೆತದಲ್ಲಿ ಕ್ರಮವಾಗಿ ರೋಹನ್ ಕಡಂ(32), ಮಿಥುನ್(0) ಹಾಗೂ ಅನಿವೃದ್ಧ್ ಜೋಶಿ(7) ವಿಕೆಟ್ ಪಡೆದು ಚಾಂಪಿಯನ್ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಅಲ್ಲದೆ ಕೌಲ್ 2021ರ ಲೀಗ್ನಲ್ಲಿ ಮೊದಲ ಹ್ಯಾಟ್ರಿಕ್ ಪಡೆದ ಶ್ರೇಯಕ್ಕೂ ಪಾತ್ರರಾದರು.
ಇದನ್ನು ಓದಿ:ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಆಟಗಾರರ ವೇತನದಲ್ಲಿ ಭಾರೀ ಏರಿಕೆ ಮಾಡಿದ ಬಿಸಿಸಿಐ