ಪಠಾಣ್ಕೋಟ್(ಪಂಜಾಬ್): ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಸಂಬಂಧಿಕರ ಮನೆ ಮೇಲೆ ದರೋಡೆಕೋರರ ಗ್ಯಾಂಗ್ ದಾಳಿ ನಡೆಸಿದೆ.
ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ತಾರಿಯಾಲ್ ಹಳ್ಳಿಯಲ್ಲಿ ದರೋಡೆಕೋರರು ದಾಳಿ ನಡೆಸಿದ್ದು, 58 ವರ್ಷದ ರೈನಾ ಸಂಬಂಧಿಕರೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಕುಟುಂಬದ ನಾಲ್ವರು ಸದಸ್ಯರಿಗೆ ಗಂಭೀರವಾದ ಗಾಯಗಳಾಗಿವೆ. ಮೃತ ವ್ಯಕ್ತಿಯನ್ನು ಸರ್ಕಾರಿ ಗುತ್ತಿಗೆದಾರ ಅಶೋಕ್ ಕುಮಾರ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸಿಎಸ್ಕೆ ತಂಡಕ್ಕೆ ಮತ್ತೊಂದು ಆಘಾತ: ಐಪಿಎಲ್ನಿಂದ ಹೊರ ಬಂದ ಸುರೇಶ್ ರೈನಾ!
ಆಗಸ್ಟ್ 19 ಹಾಗೂ 20ರ ಮಧ್ಯರಾತ್ರಿ ಈ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮನೆಗೆ ನುಗ್ಗಿರುವ ದರೋಡೆಕೋರರು ಕಳ್ಳತನ ಮಾಡುವ ಉದ್ದೇಶದಿಂದ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ.
ಘಟನೆಯಲ್ಲಿ 80 ವರ್ಷದ ಅಶೋಕ್ ಅವರ ತಾಯಿ ಸತ್ಯಾದೇವಿ, ಪತ್ನಿ ಅಶಾ ದೇವಿ, ಮಕ್ಕಳಾದ ಅಪಿನ್ ಮತ್ತು ಕೌಶಲ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.