ಲಾಹೋರ್ : ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಭಾರತದ ವಿರುದ್ಧ ಆಡುವಾಗ ಸದಾ ಖುಷಿಪಟ್ಟಿರುವುದಾಗಿ ಮತ್ತು ಪಾಕಿಸ್ತಾನಕ್ಕಿಂತ ಭಾರತದಲ್ಲೇ ಅಭಿಮಾನಿಗಳು ಹೆಚ್ಚು ಪ್ರೀತಿ ನೀಡಿರುವುದಾಗಿ 2016ರಲ್ಲಿ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಫ್ರಿದಿ, "ನಾನು ಯಾವಾಗಲೂ ಭಾರತವನ್ನು ಇಷ್ಟಪಡುತ್ತೇನೆ. ನಾವು ಅವರನ್ನು ಸಾಕಷ್ಟು ಬಾರಿ ಸೋಲಿಸಿದ್ದೇವೆ. ಪಂದ್ಯದ ನಂತರ ಅವರು ನಮ್ಮ ಬಳಿ ಬೇಸರ ತೋಡಿಕೊಳ್ಳುತ್ತಿದ್ದರು" ಎಂದು ಹೇಳಿದರು.
ಪಾಕ್ ತಂಡದ ನಾಯಕನಾಗಿ 2016ರ ಟಿ-20 ವಿಶ್ವಕಪ್ ಸಂದರ್ಭದಲ್ಲಿ ಭಾರತಕ್ಕೆ ಬಂದಾಗ ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಹೆಚ್ಚಿನ ಪ್ರೀತಿ ಪಡೆದುಕೊಂಡಿದ್ದೆ ಎಂದು ಅವರು ಆಗ ಹೇಳಿದ್ದರು.
ಕಾಶ್ಮೀರದ ಕುರಿತು ಆಫ್ರಿದಿ ಅವರು ಇತ್ತೀಚೆಗೆ ಮಾಡಿದ ಕಾಮೆಂಟ್‌ಗಳು ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಕುರಿತಾದ ಹೇಳಿಕೆಯಿಂದಾಗಿ ಈಗ ಯಾವ ರೀತಿ ಬಾಂದವ್ಯ ಇದೆ ಅನ್ನೋದು ತಿಳಿದಿಲ್ಲ. ಆದರೆ, ನಾನು ಅಂದಿನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದಾರೆ . ಅಷ್ಟೇ ಅಲ್ಲ, 1999ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯ ನನ್ನ ವೃತ್ತಿ ಜೀವನದ ಅವಿಸ್ಮರಣೀಯ ಇನ್ನಿಂಗ್ಸ್ ಅಂತಾ ಹೇಳಿದ್ದಾರೆ ಆಫ್ರಿದಿ. ಆ ಪಂದ್ಯದಲ್ಲಿ ಆಫ್ರಿದಿ 141 ರನ್ ಗಳಿಸಿದ್ದರು.