ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಇರುವ ಎಲ್ಲಾ ಆಯ್ಕೆಗಳ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಚರ್ಚಿಸುತ್ತಿದೆ. ಅಂತಿಮವಾಗಿ ವಿದೇಶದಲ್ಲಾದರೂ ಟೂರ್ನಿ ನಡೆಸುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ.
ಐಪಿಎಲ್ ನಡೆಸಲು ಇರುವ ಆಯ್ಕೆಗಳ ಬಗ್ಗೆ ಕ್ರಿಕೆಟ್ ಮಂಡಳಿ ಪರಿಶೀಲನೆ ನಡೆಸುತ್ತಿದೆ. ಒಂದು ವೇಳೆ ವಿದೇಶದಲ್ಲಾದರೂ ಟೂರ್ನಿ ನಡೆಸಲು ಸಿದ್ಧವಿದೆ. ಆದೆರೆ ಇದು ಕೊನೆಯ ಆಯ್ಕೆಯಾಗಿರುತ್ತದೆ ಎಂದು ಹೇಳಲಾಗಿದೆ.
ವಿದೇಶದಲ್ಲಿ ಟೂರ್ನಿ ನಡೆಸುವುದೇ ಅಂತಿಮ ಆಯ್ಕೆಯಾದರೆ ನಾವು ಅದನ್ನೂ ಪರಿಗಣಿಸುತ್ತೇವೆ. ನಾವು ಈ ಹಿಂದೆ ವಿದೇಶದಲ್ಲಿ ಟೂರ್ನಿ ಆಯೋಜನೆ ಮಾಡಿದ್ದೇವೆ. ಮತ್ತೆ ವಿದೇಶದಲ್ಲಿ ಟೂರ್ನಿ ನಡೆಸುವ ಸಂದರ್ಭ ಬಂದರೆ ನಾವು ಸಿದ್ಧರಿದ್ದೇವೆ. ಆದರೆ ಮೊದಲ ಆದ್ಯತೆ ಭಾರತದಲ್ಲಿ ಆತಿಥ್ಯ ವಹಿಸುವುದು ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಮಾರ್ಚ್ 29ರಂದು ಪ್ರಾರಂಭವಾಗಬೇಕಿದ್ದ ಐಪಿಎಲ್‌ನ 2020ರ ಆವೃತ್ತಿಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ. ಐಪಿಎಲ್ 2009ಅನ್ನು ದಕ್ಷಿಣ ಆಫ್ರಿಕಾ ಆಯೋಜಿಸಿತ್ತು ಮತ್ತು 2014ರ ಆವೃತ್ತಿಯನ್ನು ಭಾರತ ಮತ್ತು ಯುಎಇಯಲ್ಲಿ ನಡೆಸಲಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಲ್ಲಾ ಕಾರ್ಯಸೂಚಿಗಳ ನಿರ್ಧಾರವನ್ನು ಜೂನ್ 10ರವರೆಗೆ ಮುಂದೂಡಿದೆ. ಟಿ-20 ವಿಶ್ವಕಪ್ ಬಗ್ಗೆ ಸ್ಪಷ್ಟತೆ ಪಡೆಯಲು ಬಿಸಿಸಿಐ ಕಾಯುತ್ತಿದೆ ಎಂದು ಮೂಲಗಳು ತಿಳಿಸಿವೆ.