ನವದೆಹಲಿ : ಮುಂದಿನ ವರ್ಷಾರಂಭದಲ್ಲಿ ಯೋಜಿತವಾಗಿರುವ ಇಂಗ್ಲೆಂಗ್ ವಿರುದ್ಧದ ಸರಣಿಯನ್ನು ಭಾರತದಲ್ಲೇ ಆಯೋಜಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದಿಂದ ಈಗಾಗಲೇ 2020ರ ಐಪಿಎಲ್ ಟೂರ್ನಮೆಂಟ್‌ನ ಯುಎಇನಲ್ಲಿ ಆಡಿಸಲಾಗುತ್ತಿದೆ. ಇದರ ಜೊತೆಗೆ ಯುಎಇ ಕ್ರಿಕೆಟ್ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ 2021ರ ಐಪಿಎಲ್ ಆವೃತ್ತಿಯನ್ನು ಮುಂದೂಡಬಹುದು ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಗಂಗೂಲಿ ಮುಂದಿನ ವರ್ಷ ಇಂಗ್ಲೆಂಡ್ ಸರಣಿಯನ್ನು ಭಾರತದಲ್ಲೇ ಆಯೋಜಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಲಿದ್ದೇವೆ ಎಂದಿದ್ದಾರೆ.
ಭಾರತದಲ್ಲಿ 6 ಮಿಲಿಯನ್ ಕೋವಿಡ್ ಪ್ರಕರಣ ದಾಖಲಾಗಿವೆ. ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ, ಭಾರತ ವಿಶ್ವದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ 2 ಸ್ಥಾನದಲ್ಲಿದೆ. ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಆದರೂ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನಮ್ಮ ದೇಶದಲ್ಲಿಯೇ ಆಯೋಜಿಸಲು ಯೋಜಿಸುತ್ತಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ.
ಭಾರತದ ಕ್ರೀಡಾಂಗಣದಲ್ಲೇ ಈ ಸರಣಿ ಆಯೋಜಿಸುವ ಪ್ರಯತ್ನದಲ್ಲಿದ್ದೇವೆ. ಆದರೆ, ಯುಎಇನಲ್ಲಿ ಆಯೋಜನೆ ಮಾಡುವ ಲಾಭವೇನೆಂದ್ರೆ ಅಲ್ಲಿ ಮೂರು ಕ್ರೀಡಾಂಗಣಗಳಿವೆ' ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಮುಂದಿನ ವರ್ಷದ ಜನವರಿ ಮತ್ತು ಮಾರ್ಚ್ ಮಧ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನಾಡಲಿದೆ.