ನವದೆಹಲಿ: ಆಸ್ಟ್ರೇಲಿಯಾ ತಂಡಕ್ಕೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮರಳಿರುವುದು ಭಾರತೀಯ ಬೌಲರ್ಗಳಿಗೆ ತಲೆನೋವಾಗಿಲ್ಲ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ನೇತೃತ್ವದ ಭಾರತ ತಂಡ 2018/19ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಆಸೀಸ್ ತಂಡದ ವಿರುದ್ಧ 2-1ರಲ್ಲಿ ಟೆಸ್ಟ್ ಸರಣಿ, ಏಕದಿನ ಸರಣಿಯನ್ನು 2-1ರಲ್ಲಿ ಗೆದ್ದು ಬೀಗಿತ್ತು. ಟೆಸ್ಟ್ ಸರಣಿಯಲ್ಲಿ ಪೂಜಾರ, ಪಂತ್ ಮತ್ತು ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳನ್ನು ಕಾಡಿದ್ದರು.
ಆದರೆ, ಆ ಸಂದರ್ಭದಲ್ಲಿ ಆಸೀಸ್ ಆಧಾರಸ್ಥಂಭಗಳಾದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೊಳಗಾಗಿದ್ದರು. ಆದರೆ ಈ ಬಾರಿ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿರುವ ಕಾರಣ ಕೊಹ್ಲಿ ಪಡೆಗೆ ಕಠಿಣ ಸವಾಲು ಎದುರಾಗಲಿದೆ ಎಂದು ಕೆಲವು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.
ಭಾರತ ತಂಡ ಅದ್ಭುತ ವೇಗದ ಬೌಲರ್ಗಳನ್ನು ಹೊಂದಿದೆ. ಅವರು ವಿಶ್ವದ ಯಾವುದೇ ತಂಡದೆದುರು ಯಾವ ಪರಿಸ್ಥಿತಿಯಲ್ಲಾದರೂ ಸವಲೊಡ್ಡಲಿದ್ದಾರೆ. ಕಳೆದ ಪ್ರವಾಸದಲ್ಲಿ ಭಾರತ ಯಶ ಸಾಧಿಸಿದೆ. ಈ ಬಾರಿ ಆಸ್ಟ್ರೇಲಿಯಾದಲ್ಲಿ ಕಠಿಣ ಸವಾಲು ಎದುರಿಸಬೇಕಾಗಿದೆ. ಅದಕ್ಕೆ ತಂಡ ರೆಡಿಯಾಗಿದೆ ಅನ್ನೋದು ಗಂಭೀರ್ ಅಭಿಪ್ರಾಯ.
ಐಸಿಸಿ ಅಧ್ಯಕ್ಷ ಹುದ್ದೆಗೆ ಗಂಗೂಲಿ ಹೆಸರು ಕೇಳಿ ಬರುತ್ತಿರುವುದಕ್ಕೆ ತಮ್ಮ ಅಭಿಪ್ರಾಯ ತಿಳಿಸಿರುವ ಗಂಭೀರ್, ಗಂಗೂಲಿ ಆಲೋಚನೆಗಳೇನು ಎಂದು ನನಗೆ ತಿಳಿದಿಲ್ಲ. ಆದರೆ ಐಸಿಸಿ ಟಾಪ್ ಮ್ಯಾನೇಜ್ಮೆಂಟ್ನಲ್ಲಿ ಭಾರತದವರಿದ್ದರೆ ಒಳ್ಳೆಯದು ಎಂದಿದ್ದಾರೆ.