ಗಾಲೆ (ಶ್ರೀಲಂಕಾ): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಶ್ರೀಲಂಕಾ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ನಿರಾಸೆ ವ್ಯಕ್ತಪಡಿಸಿದ್ದು, ನಾನು ಕಂಡ "ಕೆಟ್ಟ ಬ್ಯಾಟಿಂಗ್" ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 135 ರನ್ಗಳಿಗೆ ಆಲ್ಔಟ್ ಆಗಿತ್ತು. ದುರಂತ ಎಂದರೆ ತವರಿನ ಮೈದಾನದಲ್ಲಿ ಶ್ರೀಲಂಕಾ ತಂಡದ ಯಾವೊಬ್ಬ ಬ್ಯಾಟ್ಸ್ಮನ್ ಕನಿಷ್ಠ ಅರ್ಧಶತಕ ಕೂಡ ದಾಖಲಿಸಲಿಲ್ಲ. 28 ರನ್ಗಳಿಸಿದ ದಿನೇಶ್ ಚಾಂಡಿಮನ್ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಮ್ಯೂಥ್ಯೂಸ್ 27, ಶನಕ 23 ರನ್ಗಳಿಸಿದರು.
ಇಂಗ್ಲೆಂಡ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಡಾಮ್ ಬೆಸ್ 10.1 ಓವರ್ಗಳಲ್ಲಿ 30 ರನ್ ನೀಡಿ 5 ವಿಕೆಟ್ ಪಡೆದರು. ವೇಗಿ ಸ್ಟುವರ್ಟ್ ಬ್ರಾಡ್ 9 ಓವರ್ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರೆ, ಜಾಕ್ ಲೀಷ್ ಒಂದು ವಿಕೆಟ್ ಪಡೆದು ಮಿಂಚಿದ್ದರು.
ಮೊದಲ ಇನ್ನಿಂಗ್ಸ್‌ನಲ್ಲಿ ಅವರ ನೀರಸ ಪ್ರದರ್ಶನಕ್ಕೆ "ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗಳು ಆಪಾದನೆಯನ್ನು ತೆಗೆದುಕೊಳ್ಳಬೇಕು" ಎಂದು ಫ್ಲವರ್ ಹೇಳಿದ್ದಾರೆ."ನಾನು ಅದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಒಂದು ವರ್ಷ ತಂಡದೊಂದಿಗೆ ಇದ್ದೇನೆ. ಇದು ನಾನು ನೋಡಿದ ಕೆಟ್ಟ ಬ್ಯಾಟಿಂಗ್. ಅದನ್ನು ವಿವರಿಸಲು ನನಗೆ ಯಾವುದೇ ಕಾರಣಗಳಿಲ್ಲ" ಎಂದು ಹೇಳಿದ್ದಾರೆ.
"ನಾನು ಹೆಚ್ಚು ತಾಂತ್ರಿಕ ಸಲಹೆಯನ್ನು ನೀಡಲು ಸಾಧ್ಯವಿಲ್ಲ. ನಾನು ಅವರೊಂದಿಗೆ ಮಾನಸಿಕ ಅಂಶದ ಬಗ್ಗೆ ಮಾತ್ರ ಮಾತನಾಡಬಲ್ಲೆ, ಮತ್ತು ಅವರ ಔಟ್ ಬಗ್ಗೆ ಅವರು ಏನು ಯೋಚಿಸುತ್ತಿದ್ದಾರೆಂದು ಕೇಳಬಹುದು. ನಾನು ಕೆಲವರೊಂದಿಗೆ ಮತ್ತು ತರಬೇತುದಾರರೊಂದಿಗೆ ಮಾತ್ರ ಮಾತನಾಡಿದ್ದೇನೆ" ಎಂದಿದ್ದಾರೆ.
ಓದಿ ಡಾಮ್ ಬೆಸ್, ಜೋ ರೂಟ್ ಆಟಕ್ಕೆ ಲಂಕನ್ನರು ದಂಗು
ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕೆಡವಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಕೂಡ 17 ರನ್ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಜ್ಯಾಕ್ ಕ್ರಾಲೆ(9) ಹಾಗೂ ಡೊಮೆನಿಕ್ ಸಿಬ್ಲಿ(4) ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯಾಗೆ ವಿಕೆಟ್ ಒಪ್ಪಿಸಿದರು.
ಆದರೆ, 3ನೇ ವಿಕೆಟ್ಗೆ ಒಂದಾದ ನಾಯಕ ಜೋ ರೂಟ್ ಮತ್ತು ಜಾನಿ ಬೈರ್ಸ್ಟೋವ್ 110 ರನ್ಗಳ ಜೊತೆಯಾಟ ನಡೆಸಿ ಆರಂಭಿಕ ಆಘಾತದಿಂದ ಪಾರು ಮಾಡಿದರು. ರೂಟ್ 115 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯ 66 ರನ್ ಹಾಗೂ ಬೈರ್ಸ್ಟೋವ್ 91 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 47 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು 127 ರನ್ಗಳಿಸಿದೆ.