ನವದೆಹಲಿ: ಭಾರತ ತಂಡವನ್ನು ಕಾಯಂ ಆಗಿ ಪ್ರತಿನಿಧಿಸುತ್ತಿದ್ದು ದಣಿವಾಗಿದೆ ಎಂದು ಭಾವಿಸುವವರು ಐಪಿಎಲ್‌ನಲ್ಲಿ ಪಾಲ್ಗೊಳ್ಳದೆ ವಿಶ್ರಾಂತಿ ತೆಗದುಕೊಳ್ಳಿ ಎಂದು ಮಾಜಿ ನಾಯಕ ಕಪಿಲ್ ದೇವ್ ಸಲಹೆ ನೀಡಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಿವೀಸ್ ಪ್ರವಾಸಕ್ಕೆ ತೆರಳಿದ ಮೂರೇ ದಿನಗಳಲ್ಲಿ ಸರಣಿಯಲ್ಲಿ ಪಾಲ್ಗೊಳ್ಳುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕಪಿಲ್ ದೇವ್ ಸೂಕ್ತ ಸಲಹೆ ನೀಡಿದ್ದಾರೆ.
"ನಿಮಗೇನಾದರೂ ದಣಿವಾದ ಅನುಭವಾಗುತ್ತಿದ್ದರೆ ಐಪಿಎಲ್ ಟೂರ್ನಿಯಲ್ಲಿ ಆಡಬೇಡಿ. ಏಕೆಂದರೆ ಐಪಿಎಲ್‌ನಲ್ಲಿ ನೀವು ದೇಶವನ್ನೇನೂ ಪ್ರತಿನಿಧಿಸುವುದಿಲ್ಲ. ನಿಮಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ದಣಿವಾಗಿದೆ ಎಂದರೆ ಐಪಿಎಲ್ ನಡೆಯುವವ ವೇಳೆ ವಿಶ್ರಾಂತಿ ತೆಗೆದುಕೊಳ್ಳಬಹುದು. ಯಾವಾಗ ನೀವು ದೇಶವನ್ನು ಪ್ರತಿನಿಧಿಸುತ್ತೀರೋ ಆವಾಗ ನಿಮ್ಮಲ್ಲಿ ಉಂಟಾಗುವ ಭಾವನೆಯೇ ಬೇರೆ" ಎಂದು ಕಪಿಲ್ ಹೇಳಿದ್ದಾರೆ.
ಆಟಗಾರರಿಗೆ ದಣಿವುವಾಗುವುದು ಯಾವಾಗ?
"ಒಂದು ಸರಣಿಯಲ್ಲಿ ಆಡುವ ಸಂದರ್ಭದಲ್ಲಿ ರನ್ ಗಳಿಸಲು ಅಥವಾ ವಿಕೆಟ್ ಪಡೆಯಲು ಸಾಧ್ಯವಾಗದಿದ್ದಾಗ ನಿಮಗೆ ನಿಮ್ಮ ಸಾಮರ್ಥ್ಯವೆಲ್ಲಾ ಖಾಲಿಯಾದ ಅನುಭವವಾಗುತ್ತದೆ. ಇದು ನನಗೂ ಕೂಡ ತುಂಬಾ ಸಲ ಅನಿಸಿದೆ. ಆದರೆ 7 ವಿಕೆಟ್ ಪಡೆದು ದಿನಕ್ಕೆ 20ರಿಂದ 30 ಓವರ್ ಎಸೆದರೂ ದಣಿವು ನಿಮ್ಮ ಬಳಿಗೆ ಸುಳಿಯುವುದಿಲ್ಲ. ಅದೇ ರೀತಿ 10 ಓವರ್ ಎಸೆದು 80 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯದ ಸಂದರ್ಭದಲ್ಲಿ ನಿಮಗೆ ಹೆಚ್ಚು ದಣಿವಾಗುತ್ತದೆ" ಎಂದು ವಿವರಿಸಿದ್ದಾರೆ.
ಇದೊಂದು ಭಾವನಾತ್ಮಕ ಸಂಗತಿ. ನಿಮ್ಮ ಮನಸ್ಸು ಹಾಗೂ ಮೆದುಳು ಆ ರೀತಿ ಕೆಲಸ ಮಾಡುತ್ತದೆ. ನೀವು ನೀಡುವಂತಹ ಪ್ರದರ್ಶನಗಳೇ ನಿಮಗೆ ತುಂಬಾ ಹಗುರ ಭಾವನೆ ಹಾಗೂ ಸಂತೋಷವನ್ನುಂಟು ಮಾಡುತ್ತವೆ. " ಎಂದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ನಾಯಕ ಅಭಿಪ್ರಾಯಪಟ್ಟಿದ್ದಾರೆ.