ಮೊಹಾಲಿ: ಇಲ್ಲಿನ ಎಎಸ್ ಬಿಂದ್ರಾ ಮೈದಾನದಲ್ಲಿ ದೆಹಲಿ ಹಾಗೂ ಪಂಜಾಬ್ ತಂಡದ ನಡುವೆ ರಣಜಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಪಂಜಾಬ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ರೂ ಮೈದಾನ ತೊರೆಯದ ಘಟನೆ ನಡೆದಿದೆ.
ಪಂದ್ಯ ನಡೆಯುತ್ತಿದ್ದ ವೇಳೆ ದೆಹಲಿ ತಂಡದ ಮಧ್ಯಮ ವೇಗಿ ಸಭೋತ್ ಬಾಟಿ ಬೌಲಿಂಗ್ನಲ್ಲಿ ಶುಭಮನ್ ಗಿಲ್ ಔಟ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವೇಳೆ ದೆಹಲಿ ತಂಡದ ಪ್ಲೇಯರ್ಸ್ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರೆ, ಗಿಲ್ ಮಾತ್ರ ಮೈದಾನ ಬಿಟ್ಟು ಹೊರಗಡೆ ನಡೆದಿಲ್ಲ. ಈ ವೇಳೆ ತಾವು ಔಟ್ ಆಗಿಲ್ಲ ಎಂದಿದ್ದಾರೆ. ಈ ವೇಳೆ ಅಂಪೈರ್ ರೆಫ್ರಿ ಜತೆ ಮಾತುಕತೆ ನಡೆಸಿ, ಔಟ್ ಇಲ್ಲ ಎಂದು ಮರುತೀರ್ಪು ನೀಡಿದ್ದಾರೆ.
ಇದರಿಂದ ಅಸಮಾಧಾನಗೊಂಡ ದೆಹಲಿ ಪ್ಲೇಯರ್ಸ್ ಪಂದ್ಯ ಆಡುವುದು ಬಿಟ್ಟು ಮೈದಾನದಿಂದ ಹೊರಗಡೆ ನಡೆದಿದ್ದಾರೆ. ಹೀಗಾಗಿ 10 ನಿಮಿಷಕ್ಕೂ ಹೆಚ್ಚು ಕಾಲ ಪಂದ್ಯ ಸ್ಥಗಿತಗೊಂಡಿದೆ. ಆದರೆ ಮ್ಯಾಚ್ ರೆಫ್ರಿ ಮಧ್ಯಪ್ರವೇಶ ಮಾಡಿದ್ದರಿಂದ ಪುನಃ ಪಂದ್ಯ ಆರಂಭಗೊಂಡಿದೆ. ಈ ವೇಳೆ ಬ್ಯಾಟ್ ಮಾಡಲು ಮೈದಾನಕ್ಕೆ ಇಳಿದ ಗಿಲ್ 43 ಎಸೆತಗಳಲ್ಲಿ 23ರನ್ಗಳಿಕೆ ಮಾಡಿ ಸಿಮಾರ್ಜೀತ್ ಸಿಂಗ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.
ಇನ್ನು ಅಂಪೈರ್ ತೀರ್ಪಿನ ವಿರುದ್ಧ ಶುಭಮನ್ ಗಿಲ್ ಆಕ್ರೋಶಗೊಂಡು ಅವರಿಗೆ ಅಸಭ್ಯ ಭಾಷೆ ಬಳಕೆ ಮಾಡಿ ಬೈದಿದ್ದಾರೆ ಎಂದು ದೆಹಲಿ ತಂಡದ ಪ್ಲೇಯರ್ಸ್ ಆರೋಪ ಮಾಡಿದ್ದಾರೆ. ಗಿಲ್ ಟೀಂ ಇಂಡಿಯಾ ಪರ ಎರಡು ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ.