ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಈ ಮೂಲಕ ಐದು ಸಲ ಪ್ರಶಸ್ತಿ ಗೆದ್ದು ಹೊಸ ದಾಖಲೆ ನಿರ್ಮಾಣ ಮಾಡಿದೆ. ರೋಹಿತ್ ಬಳಗ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ ಟೀಂ ಇಂಡಿಯಾ ಮಾಜಿ ಆಟಗಾರ ಗಂಭೀರ್ ಮಹತ್ವದ ಮಾತು ಹೇಳಿದ್ದಾರೆ.
ರೋಹಿತ್ ಶರ್ಮಾಗೆ ನಿಗದಿತ ಓವರ್ ಅಥವಾ ಟಿ-20 ನಾಯಕತ್ವ ಸಿಗದಿದ್ದರೆ ಅದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಆಯ್ಕೆಯಾಗದಿದ್ದರೆ ಅದು ಮೆನ್ ಇನ್ ಬ್ಲೂ( ಟೀಂ ಇಂಡಿಯಾ) ತಂಡಕ್ಕೆ ಆಗುವ ಬಹುದೊಡ್ಡ ನಷ್ಟ ಎಂದಿದ್ದಾರೆ.
ಒಂದು ವೇಳೆ, ರೋಹಿತ್ ವೈಟ್ ಬಾಲ್ ನಾಯಕನಾಗದಿದ್ದರೆ ಅದು ಖಂಡಿತ ನಷ್ಟ. ಆದರೆ ರೋಹಿತ್ಗೆ ಅಲ್ಲ ಎಂದಿರುವ ಗಂಭೀರ್, ಧೋನಿ ಓರ್ವ ಯಶಸ್ವಿ ನಾಯಕ ಎಂದು ನಾವು ಹೇಳುತ್ತೇವೆ. ಕಾರಣ ಅವರು ಎರಡು ವಿಶ್ವಕಪ್ ಗೆದ್ದಿದ್ದಾರೆ. ಆದರೆ ರೋಹಿತ್ ಐದು ಸಲ ಐಪಿಎಲ್ ಪ್ರಶಸ್ತಿ ಗೆದ್ದಿದ್ದಾರೆ. ಅವರಿಗೆ ನಾಯಕತ್ವ ಸಿಗಬೇಕು ಎಂದು ಹೇಳಿದ್ದಾರೆ.
ಧೋನಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ವಿರಾಟ್ ಕೊಹ್ಲಿ ಮೂರು ಮಾದರಿ ಕ್ಯಾಪ್ಟನ್ ಆಗಿದ್ದು, ಆಸ್ಟ್ರೇಲಿಯಾ ಪ್ರವಾಸದಲ್ಲೂ ಅವರೇ ತಂಡ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರೋಹಿತ್ ಶರ್ಮಾ ಒಟ್ಟು ಆರು ಸಲ ಐಪಿಎಲ್ ಟೈಟಲ್ ಗೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾಗ ಐದು ಸಲ ಹಾಗೂ 2009ರಲ್ಲಿ ಆ್ಯಡಂ ಗಿಲ್ಕ್ರಿಸ್ಟ್ ನಾಯಕತ್ವದಲ್ಲಿ ಡೆಕ್ಕನ್ ಚಾರ್ಜಸ್ ತಂಡದಲ್ಲಿದ್ದ ವೇಳೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.