ಸಿಡ್ನಿ: ರವಿಚಂದ್ರನ್ ಅಶ್ವಿನ್ ಅವರನ್ನು ಸ್ಲೆಡ್ಜ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್, ದೇಶಕ್ಕೆ ಭೇಟಿ ನೀಡುವ ತಂಡಗಳ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಲಕ್ಷಾಂತರ ಯುವಕರಿಗೆ ಒಂದು ಉದಾಹರಣೆಯಾಗಿ ನಿಲ್ಲುವಂತೆ ಆಸೀಸ್ ಮಾಜಿ ನಾಯಕ ಗ್ರೆಗ್ ಚಾಪೆಲ್ ಕರೆ ನೀಡಿದ್ದಾರೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಗೆ ಬರೆದ ಅಂಕಣದಲ್ಲಿ 40 ವರ್ಷಗಳ ಹಿಂದೆ ನಡೆದ ಅಂಡರ್ ಆರ್ಮ್ ಬೌಲಿಂಗ್ ಘಟನೆಯನ್ನು ನೆನಪಿಸಿಕೊಂಡರು.
ಆಗಿನ ಆಸೀಸ್ ತಂಡದ ನಾಯಕನಾಗಿದ್ದ ಚಾಪೆಲ್, 1981 ರಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ನ ಬ್ಯಾಟ್ಸ್‌ಮನ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವುದನ್ನು ತಪ್ಪಿಸಲು ತನ್ನ ಸಹೋದರ ಟ್ರೆವರ್‌ಗೆ ಅಂಡರ್‌ಆರ್ಮ್ ಬೌಲಿಂಗ್ ಮಾಡುವಂತೆ ಕೇಳಿಕೊಂಡಿದ್ದರು. ಇದು ಆಟದ ಸ್ಫೂರ್ತಿಗೆ ವಿರುದ್ಧವಾಗಿತ್ತು.
ಈ ಘಟನೆಯಿಂದ ಚಾಪೆಲ್ ಮತ್ತು ಅವರ ಕುಟುಂಬ ಕೂಡ ಸಾಕಷ್ಟು ನೋವು ಅನುಭವಿಸಿತು. ಅದು ನನ್ನ ಜೀವನದ ದೊಡ್ಡ ಪಾಠವಾಗಿದೆ ಎಂದು ಚಾಪೆಲ್ ಮೆಲುಕು ಹಾಕಿದ್ದಾರೆ.
"ನಮ್ಮ ರಾಷ್ಟ್ರಕ್ಕೆ ಭೇಟಿ ನೀಡುವ ತಂಡಗಳಿಗೆ ಗೌರವ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಆತಿಥೇಯರ ಜವಾಬ್ದಾರಿ. ಆಟಗಾರರು ತಮ್ಮ ಎದುರಾಳಿಗಳೊಂದಿಗೆ ಅಗೌರವದಿಂದ ನಡೆದುಕೊಳ್ಳುವುದಾದರೆ ಸಾರ್ವಜನಿಕರು ಕೂಡ ಅಗೌರವದಿಂದ ನಡೆದುಕೊಳ್ಳುತ್ತಾರೆ. ಆಟಗಾರರು ಉತ್ತಮ ನಡವಳಿಕೆ ತೋರಿಸಿದರೆ ಪ್ರೇಕ್ಷಕರು ಇದನ್ನು ಅನುಸರಿಸುವ ಸಾಧ್ಯತೆಯಿದೆ" ಎಂದು ಚಾಪೆಲ್, ಅಂಕಣದಲ್ಲಿ ಬರೆದಿದ್ದಾರೆ.
ಮೈದಾನದಲ್ಲಿ ಬ್ಯಾಟ್ ಮತ್ತು ಬಾಲ್ ಮಾತನಾಡಲು ಅವಕಾಶ ಮಾಡಿಕೊಡುವ ಮೂಲಕ ಲಕ್ಷಾಂತರ ಪುಟ್ಟ ಬಾಲಕ - ಬಾಲಕಿಯರಿಗೆ ಉತ್ತಮ ಉದಾಹರಣೆಯಾಗಿ ನಿಲ್ಲುವಂತೆ ಪೇನ್ ಅವರನ್ನು ಕೇಳಿಕೊಂಡಿದ್ದಾರೆ.