ಮೆಲ್ಬೋರ್ನ್ : ಅಡಿಲೇಡ್‌ನಲ್ಲಿನ ಅವಮಾನವು ಭಾರತಕ್ಕೆ "ಗಂಭೀರ ಗಾಯ" ಮಾಡಿದೆ. ಆಸ್ಟ್ರೇಲಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡುವ "ಉತ್ತಮ ಅವಕಾಶ" ಹೊಂದಿದೆ ಎಂದು ಆಸೀಸ್‌ನ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
"ಮೊದಲ ಪಂದ್ಯದ ಸೋಲು ಭಾರತಕ್ಕೆ ಗಂಭೀರ ಗಾಯ ಮಾಡಿದೆ. ಆಸ್ಟ್ರೇಲಿಯಾಗೆ ಕ್ಲೀನ್ ಸ್ವೀಪ್ ಮಾಡಲು ಉತ್ತಮ ಅವಕಾಶವಿದೆ. ಅಡಿಲೇಡ್ನಲ್ಲಿ ಪಡೆದ ಫಲಿತಾಂಶವೇ ಮೆಲ್ಬೋರ್ನ್ನಲ್ಲೂ ಪುನರಾವರ್ತನೆಯಾದ್ರೆ, ಭಾರತ ಕಂಬ್ಯಾಕ್ ಮಾಡುವುದು ತುಂಬಾ ಕಷ್ಟ" ಎಂದಿದ್ದಾರೆ.
ಉಳಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿಲ್ಲ. ಈ ಸೋಲಿನ ಬಳಿಕ ತಂಡವನ್ನು ಎದ್ದು ನಿಲ್ಲಿಸುವ ಶಕ್ತಿ ಯಾರಲ್ಲೂ ಇಲ್ಲ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಕೆಲವು ಬದಲಾವಣೆ ಮಾಡಬೇಕು. ಕೊಹ್ಲಿ ಅಲಭ್ಯತೆಯಿಂದಾಗಿ ಬ್ಯಾಟಿಂಗ್ ಬಲವನ್ನು ಹೆಚ್ಚಿಸಬೇಕಿದೆ. ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು" ಎಂದಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿರುವ ಪೃಥ್ವಿ ಶಾ ಅವರನ್ನೂ ಕೈ ಬಿಡುವ ಸಾಧ್ಯತೆ ಇದೆ ಎಂದು ಪಾಂಟಿಂಗ್ ಹೇಳಿದ್ದಾರೆ.