ಮುಂಬೈ: ಕರ್ನಾಟಕದ ಕೊಡಗಿನ ವೀರ ರಾಬಿನ್ ಉತ್ತಪ್ಪ ಪ್ರಸ್ತುತ ವರ್ಷದಲ್ಲಿ ನಡೆಯಲಿರುವ ಸೀಮಿತ ಓವರ್ಗಳ ಪಂದ್ಯಕ್ಕೆ ಕೇರಳ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡದಲ್ಲಿ ಅವಕಾಶ ಸಿಗದ ಹಿನ್ನಲೆಯಲ್ಲಿ ಸೌರಾಷ್ಟ್ರ ಪರ ಆಡಿದ್ದ ಉತ್ತಪ್ಪ, ಪ್ರಸ್ತುತ ವರ್ಷದಿಂದ ಕೇರಳ ತಂಡದಲ್ಲಿ ಆಡಲು ನಿರ್ಧರಿಸಿದ್ದಾರೆ. ಅಲ್ಲದೆ ಕೇರಳ ತಂಡಕ್ಕೆ ಸೇರುತ್ತಿದ್ದಂತೆ ಸೀಮಿತ ಓವರ್ಗಳ ಟ್ರೋಫಿಗಳಾದ ವಿಜಯ್ ಹಜಾರೆ, ಸಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಕೇರಳ ತಂಡವನ್ನು ಉತ್ತಪ್ಪ ಮುನ್ನಡೆಸಲಿದ್ದಾರೆ ಎಂದು ಕೇರಳ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶ್ರೀಜಿತ್ ವಿ. ನಾಯರ್ ತಿಳಿಸಿದ್ದಾರೆ.
ಕಳೆದ ತಿಂಗಳು ನಡೆದಿದ್ದ ಕೆ.ತಿಪ್ಪಯ್ಯ ಮೆಮೊರಿಯಲ್ ಕ್ರಿಕೆಟ್ ಟೂರ್ನಾಮೆಂಟ್ನಲ್ಲಿ ಕೇರಳ ತಂಡವನ್ನು ಮುನ್ನಡೆಸಿದ್ದ ಉತ್ತಪ್ಪ, ಖಾಯಂ ನಾಯಕ ಸಚಿನ್ ಬೇಬಿ ಗಾಯಗೊಂಡಿರುವ ಕಾರಣ ಸೀಮಿತ ಓವರ್ಗಳ ಟೂರ್ನಾಮೆಂಟ್ನಲ್ಲಿ ಉತ್ತಪ್ಪರನ್ನು ನಾಯಕರನ್ನಾಗಿ ನೇಮಿಸಲಾಗಿದೆ. ರಣಜಿ ಟ್ರೋಫಿಗೆ ಇನ್ನು ಯಾವುದೇ ನಾಯಕನನ್ನು ನೇಮಿಸುವ ಬಗ್ಗೆ ಚರ್ಚೆಯಾಗಿಲ್ಲ ಎಂದು ನಾಯರ್ ತಿಳಿಸಿದ್ದಾರೆ.
ಉತ್ತಪ್ಪ ಭಾರತ ತಂಡದ ಪರ 46 ಏಕದಿನ ಪಂದ್ಯ, 13 ಟಿ20 ಪಂದ್ಯಗಳನ್ನಾಡಿದ್ದಾರೆ. 136 ಪ್ರಥಮ ದರ್ಜೆ,189 ಟೆಸ್ಟ್ ಪಂದ್ಯ ಆಡಿದ್ದು, ಸುಮಾರು 17 ವರ್ಷಗಳಿಂದ ಕ್ರಿಕೆಟ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.