ದುಬೈ: ಧೋನಿ ನಾಯಕತ್ವದಲ್ಲಿ ಆಡಿರುವ ಕನ್ನಡಿಗ ಹಾಗೂ ಭಾರತ ತಂಡದ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ತಮ್ಮ ಹಾಗೂ ಧೋನಿ ನಡುವಿನ ಸ್ನೇಹ ಸಂಬಂಧ ಹಾಗೂ ಅವರೊಂದಿಗೆ ರೂಮ್ ಹಂಚಿಕೊಂಡಿದ್ದ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ಭಾರತಕ್ಕೆ 2 ವಿಶ್ವಕಪ್ ತಂದುಕೊಟ್ಟಿದ್ದ ಮಹೇಂದ್ರ ಸಿಂಗ್ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರ ಈ ನಿರ್ಧಾರ ಬಹಳ ಜನರಿಗೆ ಆಶ್ಚರ್ಯ ತಂದಿತ್ತು. ಧೋನಿ ತಮ್ಮ ಇನ್ಸ್ಟಾಗ್ರಾಂ ಖಾತೆ ಮೂಲಕ ಈ ನಿರ್ಧಾರ ಪ್ರಕಟಿಸಿದ್ದರು. ಈ ಸಂದರ್ಭದಲ್ಲಿ ಹಲವು ಮಂದಿ ಹಾಲಿ-ಮಾಜಿ ಕ್ರಿಕೆಟಿಗರು ಧೋನಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದರು.
2007ರ ಚೊಚ್ಚಲ ಟಿ-20 ವಿಶ್ವಕಪ್ನಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ ಕೂಡ ಧೋನಿ ಜೊತೆಗಿನ ಅವಿಸ್ಮರಣೀಯ ನೆನಪುಗಳು ಹಾಗೂ 2007ರ ಟಿ-20 ವಿಶ್ವಕಪ್ ಗೆದ್ದ ಸಂಭ್ರಮವನ್ನು ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ.
ಅವರೊಂದಿಗೆ (ಧೋನಿ) ಕ್ರಿಕೆಟ್ ಆಡುವುದು ತುಂಬಾ ಸೊಗಸಾಗಿತ್ತು. ನಾನು ಎಂಎಸ್ರೊಂದಿಗೆ ಹಲವು ಉತ್ತಮ ಕ್ಷಣಗಳನ್ನು ಹಂಚಿಕೊಂಡಿದ್ದೇನೆ. ಅವರ ನಾಯಕತ್ವದಲ್ಲಿ ಕೆಲವು ಅದ್ಭುತ ಸಾಹಸಗಳನ್ನು ಮಾಡಿದ್ದೇವೆ. ನಿಸ್ಸಂಶಯವಾಗಿ 2007ರ ಟಿ-20 ವಿಶ್ವಕಪ್ ಗೆಲುವು ನಮ್ಮ ಅದ್ಭುತ ಕ್ಷಣಗಳಲ್ಲಿ ಒಂದು. ಏಕೆಂದರೆ ಪ್ರತಿದಿನ ನೀವು ದೇಶಕ್ಕೆ ವಿಶ್ವಕಪ್ ತಂದುಕೊಡಲಾಗದು. ಹಾಗಾಗಿ ಅದು ನಾನು ಹೆಚ್ಚು ಪ್ರೀತಿಸುವ ಕ್ಷಣ ಎಂದು ಉತ್ತಪ್ಪ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಉತ್ತಪ್ಪ ಹೋಟೆಲ್ನಲ್ಲಿ ಧೋನಿಯೊಂದಿಗೆ ರೂಮ್ ಹಂಚಿಕೊಂಡಿದ್ದ ಸಂದರ್ಭದ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಮೈದಾನದ ಹೊರೆಗೂ ಧೋನಿ ಜೊತೆಗೆ ಹಲವು ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದೇನೆ. ಅವರ ಜೊತೆ ರೂಮ್ ಶೇರ್ ಮಾಡಿಕೊಂಡಿದ್ದ ಸಂದರ್ಭದಲ್ಲಿ ನಾವು ಹೋಟೆಲ್ನಲ್ಲಿ ಬಹಳ ಆನಂದಿಸಿದ್ದೇವೆ. ನಾವಿಬ್ಬರೂ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದೆವು. ಅವು ತುಂಬಾ ಸಾಮಾನ್ಯ ಕ್ಷಣವಾದರೂ ಅವುಗಳನ್ನು ನಾನು ಸದಾ ನೆನಪು ಮಾಡಿಕೊಳ್ಳುತ್ತೇನೆ ಎಂದು ಉತ್ತಪ್ಪ ಹೇಳಿದ್ದಾರೆ.
ಉತ್ತಪ್ಪ ಕೆಕೆಆರ್ ತಂಡದಿಂದ ಹೊರಬಿದ್ದ ನಂತರ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಈಗಾಗಲೇ ರಾಯಲ್ಸ್ ತಂಡದೊಂದಿಗೆ ಯುಎಇ ಸೇರಿಕೊಂಡಿರುವ ಉತ್ತಪ್ಪ, ಹೊಸ ತಂಡವಾದರೂ ಅದೂ ಬಹಳ ಬಲಿಷ್ಠ ತಂಡವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯಾವಳಿ ಆರಂಭಗೊಳ್ಳಲಿದ್ದು, ರಾಯಲ್ಸ್ ಮೂಲಗಳ ಪ್ರಕಾರ ಸಿಎಸ್ಕೆ ವಿರುದ್ಧ ರಾಯಲ್ಸ್ ತನ್ನ ಮೊದಲ ಪಂದ್ಯವನ್ನಾಡಲಿದೆ ಎಂದು ತಿಳಿದು ಬಂದಿದೆ.