ಧರ್ಮಶಾಲ: ಅದ್ಭುತ ಪ್ರತಿಭೆಯುಳ್ಳ ರಿಷಭ್ ಪಂತ್ ಇತರರ ತಪ್ಪುಗಳನ್ನು ನೋಡಿಯಾದರೂ ಪಾಠ ಕಲಿಯಬೇಕು ಎಂದು ದಕ್ಷಿಣ ಆಫ್ರಿಕಾ ತಂಡದ ಕೋಚ್ ಲಾನ್ಸ್ ಕ್ಲೂಸ್ನರ್ ಸಲಹೆ ನೀಡಿದ್ದಾರೆ.
ಎಂ.ಎಸ್.ಧೋನಿ ಬದಲು ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ಪಂತ್ ನಿಜಕ್ಕೂ ಪ್ರತಿಭಾವಂತ ಆಟಗಾರ. ಆದರೆ ಅವರ ಆಕ್ರಮಣಕಾರಿ ಶಾಟ್ ಸೆಲೆಕ್ಷನ್ ನೋಡಿದ್ರೆ, ಅವರ ತಪ್ಪುಗಳ ಅರಿವಾಗುತ್ತದೆ. ಪಂತ್ ಕ್ರೀಸ್ನಲ್ಲಿ ಮತ್ತಷ್ಟು ಕಾಲ ಕಳೆಯಬೇಕು, ಆಗ ಮಾತ್ರ ತನ್ನಲ್ಲಿನ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ತನ್ನದೇ ತಪ್ಪುಗಳಿಂದ ಜನ ಪಾಠ ಕಲಿಯುತ್ತಾರೆ ಎಂದು ಜನ ನಂಬಿದ್ದಾರೆ. ಆದ್ರೆ, ಇತರರ ತಪ್ಪುಗಳನ್ನ ನೋಡಿಯಾದ್ರೂ ಪಂತ್ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕ್ಲೂಸ್ನರ್ ಸಲಹೆ ಕೊಟ್ಟಿದ್ದಾರೆ.

ತನ್ನದೇ ತಪ್ಪುಗಳಿಂದ ಪಾಠ ಕಲಿಯಬೇಕಾದರೆ ಹೆಚ್ಚು ಸಮಯಬೇಕಾಗುತ್ತದೆ. ಆದ್ದರಿಂದ ಬೇರೆಯವರ ತಪ್ಪುಗಳನ್ನು ನೋಡಿ ಬೇಗ ಕಲಿಯಬಹುದು ಎಂಬುದು ಕ್ಲೂಸ್ನರ್ ಅಭಿಪ್ರಾಯ. ಪಂತ್ ಸುತ್ತಮುತ್ತ ಉತ್ತಮ ಆಟಗಾರರು ಮತ್ತು ತರಬೇತುದಾರರಿದ್ದಾರೆ. ಹೀಗಾಗಿ ಕಲಿಯಲು ಅವಕಾಶವಿದೆ. ಆದರೆ ನಿಮ್ಮ ಸ್ವಾಭಾವಿಕ ಪ್ರತಿಭೆ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದ್ದಾರೆ.