ನವದೆಹಲಿ : ರಿಷಭ್ ಪಂತ್ ಆಟವನ್ನು ನೋಡುವ ಚಟಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಒಬ್ಬ ಪರಿಪೂರ್ಣ ಮ್ಯಾಚ್ ವಿನ್ನರ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಮಾಜಿ ನಾಯಕ ದಾದಾ ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡುವುದನ್ನು ಇಷ್ಟಪಡುವುದಾಗಿಯೂ ತಿಳಿಸಿದ್ದಾರೆ. ತಂಡದಲ್ಲಿ ಸಾಕಷ್ಟು ಅದ್ಭುತ ಆಟಗಾರರಿದ್ದಾರೆ. ಹಾಗಾಗಿ, ಬಿಸಿಸಿಐ ಅಧ್ಯಕ್ಷನಾಗಿ ನಾನು ಯಾವುದೇ ಒಬ್ಬ ಆಟಗಾರ ನನ್ನ ಅಚ್ಚುಮೆಚ್ಚು ಎಂದು ಹೇಳಬಾರದು.
ಎಲ್ಲರೂ ನನ್ನ ನೆಚ್ಚಿನ ಆಟಗಾರರೆ. ಆದರೆ, ಕೊಹ್ಲಿ ಮತ್ತು ರೋಹಿತ್ ಶರ್ಮಾರ ಆಟವನ್ನು ಆನಂದಿಸುತ್ತೇನೆ ಎಂದು ಕ್ಲಾಸ್ಪ್ಲಸ್ ಆನ್ಲೈನ್ ಟ್ಯುಟೋರಿಯಲ್ ಆ್ಯಪ್ ಆಯೋಜಿಸಿದ್ದ ಸಂವಾದದಲ್ಲಿ ದಾದಾ ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಟೆಸ್ಟ್ ಚಾಂಪಿಯನ್ ಫೈನಲ್ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಲು ಬಯಸುವೆ ; ಉಮೇಶ್ ಯಾದವ್
ನನಗೆ ರಿಷಭ್ ಪಂತ್ ಆಟದ ಗೀಳು ಇದೆ. ಯಾಕೆಂದರೆ, ಅವರೊಬ್ಬ ಪರಿಪೂರ್ಣ ಮ್ಯಾಚ್ ವಿನ್ನರ್. ಜೊತೆಗೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಕೂಡ ಉತ್ತಮರು. ನಾನು ಶಾರ್ದುಲ್ ಠಾಕೂರ್ಅವರನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. ಯಾಕೆಂದರೆ, ಅವರು ಧೈರ್ಯ ಮತ್ತ ದೃಢನಿಶ್ಚಯ ಹೊಂದಿದ್ದಾರೆ ಎಂದು ದಾದಾ ಹೇಳಿದ್ದಾರೆ.
"ಭಾರತದಲ್ಲಿ ಅಪಾರ ಕ್ರಿಕೆಟ್ ಆಡುವ ಪ್ರತಿಭೆಗಳಿವೆ. ಸುನಿಲ್ ಗವಾಸ್ಕರ್ ನಂತರ ಏನಾಗಬಹುದು ಎಂದು ಜನ ಯೋಚಿಸುತ್ತಿದ್ದರು. ನಂತರ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಬಂದರು, ಸಚಿನ್, ದ್ರಾವಿಡ್ ತೊರೆದಾಗ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹೀಗೆ ಭಾರತ ಪ್ರತಿ ಪೀಳಿಗೆಯಲ್ಲೂ ವಿಶ್ವವನ್ನು ಮಣಿಸುವ ಕ್ರಿಕೆಟರ್ಗಳನ್ನು ಸೃಷ್ಟಿಸುತ್ತಿದೆ ಎಂದು ನಾನು ಭಾವಿಸುತ್ತೇನೆಂದು" ಬಿಸಿಸಿಐ ಬಾಸ್ ತಿಳಿಸಿದ್ದಾರೆ.