ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಯಗಳಿಸಿದ ಭಾರತ ತಂಡದ ಭಾಗವಾಗಿದ್ದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇಂದು ತವರಿಗೆ ಮರಳಿದ್ದಾರೆ.
ರಾಜ್ಯ ಸರ್ಕಾರದ ಅಧಿಕಾರಿಗಳು ಜಾರಿಗೆ ತಂದಿರುವ ನಿಯಮಾವಳಿ ಪ್ರಕಾರ ತಮಿಳುನಾಡಿನ ಈ ಇಬ್ಬರು ಆಟಗಾರರು ಆರು ದಿನಗಳವರೆಗೆ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಅಶ್ವಿನ್ 12 ವಿಕೆಟ್ ಪಡೆದಿದ್ದರು. ಆದರೆ ಗಾಯದಿಂದಾಗಿ ಬ್ರಿಸ್ಬೇನ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಿಂದ ಹೊರಗುಳಿದಿದ್ದರು. ಬೆನ್ನು ನೋವಿದ್ದರೂ ಬ್ಯಾಟಿಂಗ್ ಮಾಡಿದ ಅಶ್ವಿನ್, ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಹನುಮ ವಿಹಾರಿ ಅವರೊಂದಿಗೆ 62 ರನ್ ಜೊತೆಯಾಟವಾಡಿ ಅವಿಸ್ಮರಣೀಯ ಡ್ರಾ ಸಾಧಿಸಿದರು.
ಓದಿ ರಾಹುಲ್, ಗೇಲ್ ಅವರನ್ನು ವಾಪಸ್ ಕಳುಹಿಸಿ: ಆರ್ಸಿಬಿ ಅಭಿಮಾನಿಗೆ ವಾಸೀಮ್ ಜಾಫರ್ ಉತ್ತರ ನೋಡಿ
ವಾಷಿಂಗ್ಟನ್ ಸುಂದರ್ ಗಬ್ಬಾ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿ, ಮೊದಲ ಇನ್ನಿಂಗ್ಸ್‌ನಲ್ಲಿ 62 ರನ್ ಗಳಿಸಿ 3 ವಿಕೆಟ್ ಪಡೆದುಕೊಂಡಿದ್ರು. ಶಾರ್ದೂಲ್ ಠಾಕೂರ್ ಜೊತೆ ಸೇರಿ ಆಸ್ಟ್ರೇಲಿಯಾದ ಮಾರಕ ದಾಳಿಯನ್ನು ಎದುರಿಸಿದ ಇಬ್ಬರು ಆಟಗಾರರು ಮೊದಲ ಇನ್ನಿಂಗ್ಸ್‌ನಲ್ಲಿ 123 ರನ್‌ಗಳ ಜೊತೆಯಾಟವಾಡಿ ಸೋಲಿನ ಸುಳಿಯಿಂದ ಭಾರತವನ್ನು ಕಾಪಾಡಿದ್ದರು.
ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಈ ಇಬ್ಬರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ತಂಡದ ಇತರ ಸದಸ್ಯರು ಗುರುವಾರ ತವರಿಗೆ ಮರಳಿದ್ದರು.