ನವದೆಹಲಿ : ಹೆಸರು ಬದಲಾವಣೆ, ಹೊಸ ಆಟಗಾರರ ಸೇರ್ಪಡೆ, ಬಲಿಷ್ಠ ತಂಡ ಕಟ್ಟಿರುವ ಪಂಜಾಬ್ ಕಿಂಗ್ಸ್ ಮಿನಿ ಹರಾಜಿನಲ್ಲಿ ಡೆತ್ ಬೌಲಿಂಗ್ ಸುಧಾರಣೆಗಾಗಿ ದುಬಾರಿ ಮೊತ್ತ ವ್ಯಯಿಸಿದೆ. ಆದರೆ, ಈ ಬಾರಿಯೂ ಮಧ್ಯಮ ಕ್ರಮಾಂಕ ಮತ್ತು ಸ್ಪಿನ್ ಬೌಲಿಂಗ್ ಮಾತ್ರ ಹೇಳಿಕೊಳ್ಳುವಷ್ಟು ಸ್ಫೂರ್ತಿದಾಯಕವಾಗಿಲ್ಲ ಅನ್ನೋದು ಸತ್ಯ.
ಪಂಜಾಬ್ ಕಿಂಗ್ಸ್ ಕಳೆದ ಆವೃತ್ತಿಯಲ್ಲಿ 6ನೇ ಸ್ಥಾನ ಅಲಂಕರಿಸಿತ್ತು. ಮೊದಲಾರ್ಧದಲ್ಲಿ ಸಾಲು ಸಾಲು ಸೋಲು ಕಂಡರೂ, ದ್ವಿತೀಯಾರ್ಧದಲ್ಲಿ ರೋಚಕ ಹೋರಾಟ ನಡೆಸಿ ಕೂದಲೆಳೆಯ ಅಂತರದಿಂದ ಪ್ಲೇ ಆಫ್ ತಪ್ಪಿಸಿಕೊಂಡಿತ್ತು. ದುರಾದೃಷ್ಟವಶಾತ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಶಾರ್ಟ್ ರನ್ ಕರೆ ಕೂಡ ಕಿಂಗ್ಸ್ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿತ್ತು.
ಜೊತೆಗೆ ವೇಗಿ ಮೊಹಮ್ಮದ್ ಶಮಿಗೆ ನಿರೀಕ್ಷಿಸಿದ ಬೆಂಬಲ ಸಿಗಲಿಲ್ಲ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್ರ ದಾರುಣ ವೈಫಲ್ಯ ಕೂಡ ಪಂಜಾಬ್ ತಂಡಕ್ಕೆ ಅಪಾರ ನಷ್ಟವನ್ನುಂಟು ಮಾಡಿತ್ತು.
ತಂಡದ ಬಲ
ಅಪಾಯಕಾರಿ ಮತ್ತು ಸ್ಫೋಟಕ ಆರಂಭಿಕರು : ಈ ವರ್ಷ ಕೆಲ ಬದಲಾವಣೆ ಮಾಡಿಕೊಂಡಿರುವುದರಿಂದ ಪಂಜಾಬ್ ಬ್ಯಾಟಿಂಗ್ ಪ್ರಬಲವಾಗಿದೆ. ಕನ್ನಡಿಗರಾದ ಕೆ ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ರಂತಹ ಅಪಾಯಕಾರಿ ಆರಂಭಿಕರನ್ನು ಹೊಂದಿದೆ. ಕಳೆದ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ 288ರನ್ನು ಗಳಿಸಿದ್ದ ಕ್ರಿಸ್ ಗೇಲ್ 3ನೇ ಕ್ರಮಾಂಕದಲ್ಲಿದ್ದಾರೆ. ಕಳೆದ ವರ್ಷ ಅವರನ್ನು ಬೆಂಚ್ ಕಾಯಿಸಿ ಟೀಕೆಗೆ ಗುರಿಯಾಗಿದ್ದ ಪಂಜಾಬ್, ಈ ಬಾರಿ ಮೊದಲ ಪಂದ್ಯದಿಂದಲೇ ಕಣಕ್ಕಿಳಿಸುವ ಸಂಭವ ಹೆಚ್ಚಿದೆ.
ಇನ್ನು, ವಿಂಡೀಸ್ ಯುವ ಪ್ರತಿಭೆ ನಿಕೋಲಸ್ ಪೂರನ್ ಕೂಡ 4ನೇ ಕ್ರಮಾಂಕದಲ್ಲಿದ್ದಾರೆ. ಇವರ ಜೊತೆಗೆ ನಂಬರ್ 1 ಟಿ20 ಬ್ಯಾಟ್ಸ್ಮನ್ ಡೇವಿಡ್ ಮಲನ್ ಸೇವೆ ಕೂಡ ಲಭ್ಯವಿದೆ. ಇವರು ಕ್ರಿಸ್ ಗೇಲ್ಗೆ ಬ್ಯಾಕ್ಅಪ್ ಆಗಲಿದ್ದಾರೆ.
ಪರಿಪೂರ್ಣ ಆಲ್ರೌಂಡರ್ ಸೇರ್ಪಡೆ : ಮ್ಯಾಕ್ಸ್ವೆಲ್ರಿಂದ ತೆರವಾಗಿದ್ದ ಸ್ಥಾನಕ್ಕೆ ಆಸ್ಟ್ರೇಲಿಯಾದ ಮೋಯಿಸಸ್ ಹೆನ್ರಿಕ್ಸ್ ಮತ್ತು ತಮಿಳುನಾಡಿದ ಶಾರುಖ್ ಖಾನ್ ಬಲ ತುಂಬಿದ್ದಾರೆ. ಇವರ ಜೊತೆಗೆ ಆಲ್ರೌಂಡರ್ ವಿಭಾಗದಲ್ಲಿ ದೀಪಕ್ ಹೂಡ ಮತ್ತು ವಿದೇಶಿ ಆಲ್ರೌಂಡರ್ಗಳಲ್ಲಿ ಫ್ಯಾಬಿಯನ್ ಅಲೆನ್ ಕೂಡ ತಂಡದಲ್ಲಿದ್ದಾರೆ.
ಬಲಿಷ್ಠ ವೇಗದ ಬೌಲಿಂಗ್ ವಿಭಾಗ : ಕಳೆದ ವರ್ಷದಲ್ಲಿ ಡೆತ್ ಬೌಲಿಂಗ್ನಿಂದ ನೊಂದಿದ್ದ ಪಂಜಾಬ್ ಈ ವರ್ಷದ ಹರಾಜಿನಲ್ಲಿ ಜಾಣತನ ತೋರಿಸಿ ಬಿಗ್ಬ್ಯಾಶ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾದ ಜೇ ರಿಚರ್ಡ್ಸನ್ ಮತ್ತು ರಿಲೇ ಮೆರಿಡಿತ್‌ರನ್ನು ಖರೀದಿಸಿದೆ. ಈಗಾಗಲೇ ಮೊಹಮ್ಮದ್ ಶಮಿ ಮತ್ತು ಕ್ರಿಸ್ ಜೋರ್ಡನ್ ಅವರನ್ನು ಹೊಂದಿರುವ ರಾಹುಲ್ ಪಡೆಗೆ ಅಸಾಧಾರಣ ವೇಗದ ಬೌಲಿಂಗ್ ಘಟಕ ಪಡೆದಿದೆ.
ಅನುಭವಿ ಸ್ಪಿನ್ನರ್ಗಳ ಕೊರತೆ : ಪಂಜಾಬ್ ತಂಡದಲ್ಲಿ ಉತ್ತಮ ಗುಣಮಟ್ಟದ ಸ್ಪಿನ್ನರ್ಗಳ ಕೊರತೆಯಿದೆ. ಕಳೆದ ಬಾರಿ ದುಬಾರಿಯಾದ ಗೌತಮ್ರನ್ನು ಬಿಟ್ಟಿರುವುದರಿಂದ ತಂಡದಲ್ಲಿ ಮುರುಗನ್ ಅಶ್ವಿನ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಮಾತ್ರ ತಂಡದಲ್ಲಿರುವ ಸ್ಪಿನ್ನರ್ಗಳಾಗಿದ್ದಾರೆ.
ಇವರನ್ನು ಹೊರೆತುಪಡಿಸಿದರೆ ದೇಸಿ ಪ್ರತಿಭೆ ಜಲಜ್ ಸಕ್ಸೇನಾ ಈ ವರ್ಷ ತಂಡ ಸೇರಿದ್ದಾರೆ. ಈ ಮೂವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಭವ ಇಲ್ಲದವರಾಗಿರುವುದು ಪ್ರೀತಿ ಪಡೆಯ ಮಹಾ ದೌರ್ಬಲ್ಯ. ಇದರ ಜೊತೆ ಮೊಹಮ್ಮದ್ ಶಮಿ ಜೊತೆಗಾರನಾಗಿ ಯಾವುದೇ ಭಾರತದ ವೇಗಿ ತಂಡದಲ್ಲಿಲ್ಲ.
13 ಆವೃತ್ತಿಗಳಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿರುವ ಪಂಜಾಬ್ ಕಿಂಗ್ಸ್ ತಂಡ ಕೆಲವು ದೌರ್ಬಲ್ಯಗಳನ್ನು ಹೊಂದಿದ್ದರೂ ಇತರೆ ತಂಡಗಳಿಗೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಕನ್ನಡಿಗರಾದ ರಾಹುಲ್ ನಾಯಕತ್ವ ಮತ್ತು ಅನಿಲ್ ಕುಂಬ್ಳೆಯ ಕೋಚಿಂಗ್ ಬಲವಿದ್ದು ಟಾಪ್-4ರಲ್ಲಿ ಕಾಣಿಸಿಕೊಳ್ಳುವ ತಂಡಗಳಲ್ಲಿ ಒಂದಾಗಲಿದೆ.