ಬ್ರಿಸ್ಬೇನ್: ವೇದಾ ಕೃಷ್ಣಮೂರ್ತಿ ನೇತೃತ್ವದ ಭಾರತ ಎ ಮಹಿಳಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ಮಹಿಳಾ ತಂಡದ ವಿರುದ್ಧ 81 ರನ್ಗಳ ಸೋಲನುಭವಿಸಿದೆ.
ಮೊದಲು ಬ್ಯಾಟಿಂಗ್ ಆಸ್ಟ್ರೇಲಿಯಾ ಎ ಮಹಿಳಾ ತಂಡ 315 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕ ಆಟಗಾರ್ತಿ ಜಾರ್ಜಿಯಾ ರೆಡ್ಮೇನ್ 113 ರನ್ ಗಳಿಸಿದರೆ, ಸ್ಫೋಟಕ ಬ್ಯಾಟಿಂಗ್ ನಡೆಸಿದ ಆಲ್ರೌಂಡರ್ ಎರಿನ್ ಬರ್ನ್ಸ್ ಕೇವಲ 59 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 107 ಸಿಡಿಸಿ ತಂಡದ ಮೊತ್ತವನ್ನು 300 ರ ಗಡಿ ದಾಟಿಸಿದರು.
ಭಾರತದ ಪರ ದೇವಿಕ ವೈವಿಧ್ಯ 2, ಟಿಪಿ ಕನ್ವರ್, ಮಾನ್ಸಿ ಜೋಷಿ, ಮನಾಲಿ ದಕ್ಷಿಣಿ ತಲಾ ಒಂದು ವಿಕೆಟ್ ಪಡೆದರು.
316 ರನ್ಗಳ ಬೃಹತ್ ಗುರಿ ಪಡೆದ ಭಾರತ ವನಿತೆಯರ ತಂಡಕ್ಕೆ ಪ್ರಿಯಾ ಪೂನಿಯಾ ಹಾಗೂ ಶೆಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ಕೇವಲ 36 ಎಸೆತಗಳಲ್ಲಿ 46 ರನ್ ಸಿಡಿಸಿದ ಶೆಫಾಲಿ ಔಟಾದರು. ನಂತರ ಬಂದ ಹೇಮಲತಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ನಾಯಕಿ ಕನ್ನಡತಿ ವೇದಾ ಹಾಗೂ ಜ ಮೂರನೇ ವಿಕೆಟ್ಗೆ 107ರನ್ಗಳ ಚೇತರಿಕೆ ಜೊತೆಯಾಟ ನಡೆಸಿದರು.
ಆದರೆ 40 ರನ್ಗಳಿಸಿದ ವೇದಾ ಔಟಾಗುತ್ತಿದ್ದಂತೆ ಭಾರತ ವನಿತೆಯರ ತಂಡ ಪೆವಿಲಿಯನ್ ದಾರಿ ಹಿಡಿಯಿತು. ಪ್ರಿಯಾ ಪೂನಿಯಾ ಮಾತ್ರ ಆಸೀಸ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ 127 ಎಸೆತಗಳಲ್ಲಿ 112 ರನ್ ಸಿಡಿಸಿದರು. ಆದರೆ ಇವರಿಗೆ ಸರಿಯಾದ ಸಾಥ್ ಸಿಗದ ಕಾರಣ ಭಾರತ ತಂಡ ಸೋಲನುಭವಿಸಿತು.
ಒಟ್ಟಾರೆ 44.1 ಓವರ್ಗಳಲ್ಲಿ 234 ರನ್ಗಳಿಗೆ ಆಲೌಟ್ ಆದ ವೇದಾ ಪಡೆ 81 ರನ್ಗಳ ಸೋಲನುಭವಿಸಿತು. ಆಸೀಸ್ ಪರ ಮೊಲ್ಲಿ ಸ್ಟ್ರಾನೋ 3 , ಅನ್ನಾಬೆಲ್ ಸುದರ್ಲ್ಯಾಂಡ್ 4 ಬೆಲಿಂಡಾ ವಕರೆವಾ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆಸೀಸ್ ತಂಡ ಸರಣಿಯನ್ನು 1-1 ರಲ್ಲಿ ಸಮಬಲ ಸಾಧಿಸಿಕೊಂಡಿತು.
ಮೂರನೇ ಪಂದ್ಯ ಡಿಸೆಂಬರ್ 16 ರಂದು ಬ್ರಿಸ್ಬೇನ್ನಲ್ಲಿ ನಡೆಯಲಿದೆ.