ನವದೆಹಲಿ: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ತಮ್ಮ ನೆಚ್ಚಿನ ಓಪನಿಂಗ್ ಪಾರ್ಟ್ನರ್ ಯಾರು ಎಂಬ ಪ್ರಶ್ನೆಗೆ ಡೆಲ್ಲಿ ಕ್ಯಾಪಿಟಲ್ ನಡೆಸಿದ ಲೈವ್ ಸೆಶನ್ ವೇಳೆ ಬಹಿರಂಗಗೊಳಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಒಂದೂ ಬಾರಿ ಫೈನಲ್ ತಲುಪದ ಏಕೈಕ ತಂಡ ಎಂಬ ಕುಖ್ಯಾತಿ ಪಡೆದಿರುವ ಡೆಲ್ಲಿ ಡೇರ್ ಡೇವಿಲ್ಸ್ ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ ಎಂದು ಹೆಸರು ಬದಲಿಸಿಕೊಂಡಿತ್ತು. ಹೆಸರು ಬದಲಿಸಿಕೊಂಡ ನಂತರ ಬಹುಪಾಲು ತಂಡವನ್ನು ಬದಲಿಸಿಕೊಂಡಿದ್ದ ಪ್ರಾಂಚೈಸಿ ಶಾ, ಪಂತ್ ಹಾಗೂ ಅಯ್ಯರ್ ಅವರಂತಹ ಯುವ ಆಟಗಾರರು, ಶಿಖರ್ ಧವನ್, ಅಮಿತ್ ಮಿಶ್ರಾರಂತಹ ಅನುಭವಿಗಳು ಹಾಗೂ ರಿಕಿ ಪಾಂಟಿಂಗ್ ಹಾಗೂ ಸೌರವ್ ಗಂಗೂಲಿಯನ್ನು ತರಬೇತಿದಾರರನ್ನಾಗಿ ನೇಮಿಸಿತ್ತು. 2019ರ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಡೆಲ್ಲಿ ಕ್ವಾಲಿಫೈಯರ್ ತಲುಪಿದರೂ ಫೈನಲ್ ತಲುಪುವಲ್ಲಿ ಎಡವಿತ್ತು.
ಕೊರೊನಾ ಲಾಕ್ಡೌನ್ನಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಇಲ್ಲದ್ದರಿಂದ ಕೆಲವು ಆಟಗಾರರು ಇನ್ಸ್ಟಾಗ್ರಾಮ್ ಲೈವ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ನಿನ್ನೆ ನಡೆದ ವಿಡಿಯೋ ಸಂದರ್ಶನದಲ್ಲಿ ಪೃಥ್ವಿ ಶಾ ತಮ್ಮ ನೆಚ್ಚಿನ ಬ್ಯಾಟಿಂಗ್ ಪಾರ್ಟ್ನರ್ರನ್ನು ರಿವೀಲ್ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ನಡೆಸಿಕೊಟ್ಟ ಇನ್ಸ್ಟಾಗ್ರಾಮ್ ಲೈವ್ ಸಂದರ್ಶನದಲ್ಲಿ ಯುವ ಆಟಗಾರ ಪೃಥ್ವಿ ಶಾರನ್ನ ನಿಮ್ಮ ನೆಚ್ಚಿನ ಆಟಗಾರ ಯಾರು ಎಂದು ಕೇಳಿದ್ದಕ್ಕೆ ಯುವ ಬ್ಯಾಟ್ಸ್ಮನ್ ಭಾರತದ ಅನುಭವಿ ಶಿಖರ್ ಧವನ್ ಹೆಸರನ್ನು ಸೂಚಿಸಿದ್ದಾರೆ.
'ಶಿಖರ್ ಧವನ್, ಏಕೆಂದರೆ ನಾನು ಅವರ ಜೊತೆಗೆ ಸಾಕಷ್ಟು ಪಂದ್ಯಗಳಲ್ಲಿ ಆರಂಭಿಕ ಜೊತೆಗಾರನಾಗಿ ಆಗಿ ಆಡಿದ್ದೇನೆ ಎಂದು ತಿಳಿಸಿದ್ದಾರೆ.
2019ರಲ್ಲಿ ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಶಾ ಕೇವಲ 55 ಎಸೆತಗಳಲ್ಲಿ 99 ರನ್ ಸಿಡಿಸಿದ್ದರು. ಅಂದಿನ ಆ ಪಂದ್ಯದಲ್ಲಿ ಡೆಲ್ಲಿ ತಂಡ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಕಂಡಿತ್ತು.