ನವದೆಹಲಿ : ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ 800 ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಮುಂಬೈ ತಂಡದ ನಾಯಕ ಪೃಥ್ವಿ ಶಾ ಪಾತ್ರರಾಗಿದ್ದಾರೆ.
ಇಂದು ಉತ್ತರಪ್ರದೇಶದ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 39 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ ಸೇರಿ 73 ರನ್ ಗಳಿಸಿ ಔಟಾದರು. ಅವರು 46 ರನ್ಗಳಿಸಿದ್ದ ವೇಳೆ ಟೂರ್ನಿಯಲ್ಲಿ 800 ರನ್ ಗಳಿಸಿದ ಶ್ರೇಯಕ್ಕೆ ಪಾತ್ರರಾದರು. 19 ಆವೃತ್ತಿಗಳಲ್ಲಿ 800 ರನ್ಗಳ ಗಡಿ ದಾಟಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾದರು.
21 ವರ್ಷದ ಯುವ ಬ್ಯಾಟ್ಸ್ಮನ್ ಟೂರ್ನಿಯಲ್ಲಿ ಆಡಿರುವ 8 ಇನ್ನಿಂಗ್ಸ್ಗಳಲ್ಲಿ 4 ಶತಕ ಹಾಗೂ ಒಂದು ಅರ್ಧಶತಕ ಸಹಿತ 827 ರನ್ಗಳಿಸಿ ಟೂರ್ನಿಯಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಅವರು ಕ್ರಮವಾಗಿ 105, 34, 227, 36, 2, 185, 165, 73 ರನ್ ಸಿಡಿಸಿದ್ದಾರೆ.
ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ನಂತರ ತಂಡದಿಂದ ಹೊರ ಬಿದ್ದಿದ್ದರು. ಇದೀಗ ತವರಿನಲ್ಲಿ ನಡೆಯುತ್ತಿರುವ ಯಾವುದೇ ಮಾದರಿಯ ತಂಡದಲ್ಲೂ ಅವಕಾಶ ಪಡೆದಿರಲಿಲ್ಲ. ವಿಜಯ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ರಾಷ್ಟ್ರೀಯ ತಂಡದ ಬಾಗಿಲು ತಟ್ಟಿದ್ದಾರೆ.
ಇದನ್ನು ಓದಿ:ವಿಭಿನ್ನ ಗೆಟಪ್ನಲ್ಲಿ ಧೋನಿ: ಅಭಿಮಾನಿಗಳಲ್ಲಿ ಅಚ್ಚರಿ, ಕುತೂಹಲ!