ಮುಂಬೈ: ಇಂಗ್ಲೆಂಡ್ ತಂಡವನ್ನು 36 ರನ್ಗಳಿಂದ ಬಗ್ಗುಬಡಿದು ಸರಣಿ ಗೆದ್ದಿದ್ದ ಭಾರತ ವಿಕಲ ಚೇತನ ಕ್ರಿಕೆಟಿಗರು ಮತ್ತು ಸಿಬ್ಬಂದಿಗೆ ನೀಡಬೇಕಿದ್ದ ನಗದು ಪುರಸ್ಕಾರವನ್ನು ಬಿಸಿಸಿಐ ನೀಡಿದೆ.
2019 ಆಗಸ್ಟ್‌ನಲ್ಲಿ ಇಂಗ್ಲೆಂಡ್ನಲ್ಲಿ ನಡೆದಿದ್ದ ಚೊಚ್ಚಲ ವಿಕಲ ಚೇತನರ ಟಿ20 ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ 36 ರನ್ ಗೆಲುವ ಮೂಲಕ ಸರಣಿ ಜಯಿಸಿತ್ತು. ಈ ಸಾಧನೆಗಾಗಿ ಕಳೆದ ಮಾರ್ಚ್‌ನಲ್ಲಿ ಬಿಸಿಸಿಐ ಸಾಂಕೇತಿಕವಾಗಿ 65 ಲಕ್ಷ ರೂ.ಗಳ ಚೆಕ್ಕನ್ನು ನಾಯಕ ವಿಕ್ರಾಂತ್ ಕೇಣಿಗೆ ವಿತರಿಸಿತ್ತು.
ಇದೀಗ ಕೊರೊನಾ ಲಾಕ್ಡೌನ್ ಇರುವ ಸಮಯದಲ್ಲಿ ಯಾವುದೇ ಆಟಗಾರರಿಗೆ ತೊಂದರೆಯಾಗಬಾರದೆಂದು ಈ ಬಾರಿ ನೈಜ ಹಣವನ್ನು ಬಿಸಿಸಿಐ ನೀಡಿದೆ. ಎಲ್ಲಾ ಆಟಗಾರರಿಗೆ, ಸಿಬ್ಬಂದಿಗೆ ಅವರವರ ಅಕೌಂಟ್‌ಗಳಿಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತದೆ ಎಂದು ವಿಕಲ ಚೇತನರ ಆಲ್ ಇಂಡಿಯಾ ಕ್ರಿಕೆಟ್ ಅಸೋಸಿಯೇಶನ್‌ನ ಅಧಿಕಾರಿಯೊಬ್ಬರು ಸುದ್ದಿ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ.
ಭಾರತ ತಂಡದಲ್ಲಿ ಒಟ್ಟು 17 ಮಂದಿ ಆಟಗಾರರು ಮತ್ತು 6 ಮಂದಿ ಸಹಾಯಕ ಸಿಬ್ಬಂದಿಯಿದ್ದರು. ಅವರೆಲ್ಲರಿಗೂ ಪುರಸ್ಕಾರದ ಹಣ ಬಿಸಿಸಿಐ ಮೂಲಕ ತಲುಪಲಿದೆ. ಈ ಮೊತ್ತವನ್ನು ಈ ಹಿಂದಿನ ಸಮಿತಿ ಅನುಮೋದಿಸಿತ್ತು.