ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ರನ್ನು ಪಿಸಿಬಿ ಆಯ್ಕೆ ಮಾಡಿದೆ. ಸ್ಪಿನ್ ಕೋಚ್ ಆಗಿ ಮುಷ್ತಾಕ್ ಅಹ್ಮದ್ ಆಯ್ಕೆಯಾಗಿದ್ದಾರೆ.
ಯೂನಿಸ್ ಖಾನ್ ಪಾಕ್ ಪರ 118 ಟೆಸ್ಟ್ಗಳಿಂದ 10,099 ರನ್, 265 ಏಕದಿನ ಪಂದ್ಯಗಳಿಂದ 7,249 ಹಾಗೂ 25 ಟಿ20 ಪಂದ್ಯಗಳಿಂದ 442 ರನ್ಗಳಿಸಿದ್ದಾರೆ. ಇವರು ಪಾಕಿಸ್ತಾನದ ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 3 ಪಂದ್ಯಗಳ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಅದಕ್ಕಾಗಿ ಪಿಸಿಬಿ ನೂತನ ಬ್ಯಾಟಿಂಗ್ ಕೋಚ್ ಹಾಗೂ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಪಿಸಿಬಿ ಸಿಇಒ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಪಾಕಿಸ್ತಾನದ ಪರ ಹಲವಾರು ದಾಖಲಿಸಿರುವ ಯೂನಿಸ್ ಖಾನ್ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಲು ಒಪ್ಪಿಕೊಂಡಿರವುದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ. ಅವರು ದೇಶದ ಯುವ ಕ್ರಿಕೆಟಿಗರಿಗೆ ಮಾದರಿಯಾಗಿದ್ದು, ಇವರ ಮಾರ್ಗದರ್ಶನದಲ್ಲಿ ಪಾಕ್ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಭಾವಿಸಿದ್ದೇವೆ ಎಂದಿದ್ದಾರೆ.
ಲೆಗ್ ಸ್ಪಿನ್ನರ್ ಮುಷ್ತಾಕ್ ಅಹ್ಮದ್ ತಂಡದ ಮೆಂಟರ್ ಹಾಗೂ ಸ್ಪಿನ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ ವಿಂಡೀಸ್ ಮತ್ತು ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿದ್ದ ಅನುಭವ ಹೊಂದಿದ್ದಾರೆ.