ದುಬೈ: ಭಾರತದ ಯುವ ವಿಕೆಟ್ ಕೀಪರ್ ಹಾಗೂ ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್, ತಮ್ಮಿಂದ ಧೋನಿಯ ಸ್ಥಾನ ತುಂಬುವುದು ಅಸಾಧ್ಯ ಎಂದು ಹೇಳಿದ್ದಾರೆ.
2019ರ ವಿಶ್ವಕಪ್ ಸೆಮಿಫೈನಲ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದಿದ್ದ ಧೋನಿ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಧೋನಿ ಸ್ಥಾನ ತುಂಬಲು ಕನ್ನಡಿಗ ಕೆಎಲ್ ರಾಹುಲ್, ರಿಷಭ್ ಪಂತ್ ಹಾಗೂ ಸಂಜು ಸಾಮ್ಸನ್ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ ವಿಕೆಟ್ ಕೀಪರ್ ಹಾಗೂ ನಾಯಕನಾಗಿರುವ ರಾಹುಲ್ ಭವಿಷ್ಯದ ಧೋನಿ ಆಗುವರೇ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಅವರು ನಿರೀಕ್ಷೆಗಳು ನನ್ನ ಮೇಲಷ್ಟೇ ಅಲ್ಲ ಪ್ರತಿಯೊಬ್ಬ ಆಟಗಾರನ ಮೇಲೂ ಇರುತ್ತದೆ. ಆದರೆ ಇದರಿಂದ ನನಗೆ ಯಾವುದೇ ಒತ್ತಡವಿಲ್ಲ. ನನ್ನ ಸದ್ಯದ ಗಮನ ಐಪಿಎಲ್ ಕಡೆಗಿದೆ. ಇನ್ನು ಧೋನಿ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆಯಾಗಿದೆ ಎಂದಿದ್ದಾರೆ.
ವಿಕೆಟ್ ಕೀಪರ್ ಜವಾಬ್ದಾರಿ ಬಗ್ಗೆ ಮಾತನಾಡಿರುವ ರಾಹುಲ್, ನಾವು ಭಾರತ ತಂಡಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಗೆದ್ದುಕೊಡಬೇಕು, ಇದಕ್ಕಾಗಿ ತಂಡದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಕ್ರಿಸ್ ಗೇಲ್ ಮತ್ತು ಮ್ಯಾಕ್ಸ್ವೆಲ್ ಅಂತಹ ಘಟಾನುಘಟಿ ಆಟಗಾರರನ್ನು ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಿದ್ದಾರೆ. ಈ ಬಾರಿ ಯುಎಇನಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಪಂಜಾಬ್ ಕೂಡ ಒಂದಾಗಿದೆ. ಏಕೆಂದರೆ ಯುಎಇನಲ್ಲಿ ಈ ಹಿಂದೆ ನಡೆದಿರುವ ಪಂದ್ಯಗಳಲ್ಲಿ ಸೋಲರಿಯದ ಏಕೈಕ ತಂಡವೆಂದರೆ ಅದರು ಕಿಂಗ್ಸ್ ಇಲೆವೆನ್ ಪಂಜಾಬ್.