ಮೌಂಟ್ ಮಾಂಗ್ನುಯಿ: ಕಿವೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿರುವ ಟೀಂ ಇಂಡಿಯಾ, ಮಂಗಳವಾರ ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ.
ಹ್ಯಾಮಿಲ್ಟನ್‌ನಲ್ಲಿ 347 ರನ್ ಗಳಿಸಿದರೂ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡ ಟೀಂ ಇಂಡಿಯಾ, ದ್ವಿತೀಯ ಏಕದಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಆದರೆ, ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ 2ನೇ ಪಂದ್ಯದಲ್ಲೂ ಸೋಲು ಕಂಡಿತು.
ಈಗಾಗಲೇ ಸರಣಿ ಸೋತಿರುವ ಭಾರತ ತಂಡ ಅಂತಿಮ ಏಕದಿನ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಸರಣಿಯುದ್ದಕ್ಕೂ ಬೆಂಚ್ ಕಾಂದಿರುವ ರಿಷಬ್ ಪಂತ್ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕನ್ನಡಿಗ ಮನೀಷ್ ಪಾಂಡೆ ಕೂಡ ಅಂತಿಮ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
5 ಟಿ-20 ಪಂಧ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿರುವ ಮನೀಷ್ ಪಾಂಡೆ, ಕೇದಾರ್ ಜಾಧವ್ ಬದಲಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಶನಿವಾರ ದ್ವಿತೀಯ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ನಾಯಕ ವಿರಾಟ್ ಕೊಹ್ಲಿ, ಈ ವರ್ಷ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಮುಂದಿನ ಪಂದ್ಯದ ಬಗ್ಗೆ ಗಮನವಿಲ್ಲ ಎಂದಲ್ಲ. ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದಿದ್ದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೇಗಿ ಶಾರ್ದೂಲ್ ಠಾಕೂರ್, 'ಪ್ರತಿ ಪಂದ್ಯವೂ ಮುಖ್ಯವಾಗಿದೆ. ನಾವು 0-2 ಅಂತರದಲ್ಲಿ ಹಿನ್ನೆಡೆ ಅನುಭವಿಸಿದ್ದೇವೆ ಎಂಬ ಮಾತ್ರಕ್ಕೆ ಅಂತಿಮ ಪಂದ್ಯ ಮುಖ್ಯವಲ್ಲ ಎಂದು ಅರ್ಥವಲ್ಲ. ಪ್ರತಿ ಅಂತಾರಾಷ್ಟ್ರೀಯ ಪಂದ್ಯವು ಪ್ರಮುಖ್ಯತೆ ಹೊಂದಿದೆ. ಈಗಾಗಲೇ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿರುವ ನಾವು ಸ್ವತಂತ್ರವಾಗಿ ಅಂತಿಮ ಪಂದ್ಯ ಆಡುತ್ತೇವೆ ಎಂದಿದ್ದರು.
ಇತ್ತ ಟಿ-20ಸರಣಿಯಲ್ಲಿ ಐದೂ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ನ್ಯೂಜಿಲ್ಯಾಂಡ್ ತಂಡ ಏಕದಿನ ಸರಣಿಯಲ್ಲಿ ಕಂಬ್ಯಾಕ್ ಮಾಡಿದೆ. ನಾಯಕ ಕೇನ್ ವಿಲಿಯಮ್ಸನ್ ಸೇರಿ ಪ್ರಮುಖ ಆಟಗಾರರ ಅಲಭ್ಯತೆಯ ನಡುವೆಯೂ ಏಕದಿನ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 3ನೇ ಪಂದ್ಯದಲ್ಲೂ ಜಯ ಸಾಧಿಸುವ ವಿಶ್ವಾಸದಲ್ಲಿದೆ.
ಸಂಭಾವ್ಯ ತಂಡ:
ಟೀಂ ಇಂಡಿಯಾ: ಪೃಥ್ವಿ ಶಾ, ಮಯಾಂಕ್ ಅಗರವಾಲ್, ವಿರಾಟ್ ಕೊಹ್ಲಿ(ಕ್ಯಾಪ್ಟನ್), ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ಕೀಪರ್), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ.
ನ್ಯೂಜಿಲ್ಯಾಂಡ್ : ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೂಲಸ್, ಥಾಮ್ ಲಾಥಮ್(ಕ್ಯಾಪ್ಟನ್), ಥಾಮ್ ಬ್ಲಂಡೆಲ್, ರಾಸ್ ಟೇಲರ್, ಜೇಮ್ಸ್ ನಿಸ್ಸಮ್, ಗ್ರ್ಯಾಂಡ್ಹೊಮ್, ಸ್ಯಾಟ್ನರ್,ಥೀಮ್ ಸೌಥಿ, ಇಶಾ ಸೋಧಿ, ಹಿಮಿಶ್ ಬೆನಿಟ್.