ಲಂಡನ್: ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಜೊ ರೂಟ್ ಅನುಪಸ್ಥಿತಿಯಲ್ಲಿ ನನಗೆ ನಾಯಕತ್ವ ನೀಡಿದ್ರೂ ನನ್ನ ಆಟದ ಸ್ಟೈಲ್ನಲ್ಲಿ ಯಾವುದೇ ರೀತಿಯ ಬದಲಾವಣೆ ಆಗಲ್ಲ ಎಂದು ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ವಿರುದ್ಧ ಜುಲೈ 8ರಿಂದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಇಂಗ್ಲೆಂಡ್ ತಂಡದ ಕ್ಯಾಪ್ಟನ್ ರೂಟ್ ಸರಣಿಯಲ್ಲಿ ಭಾಗಿಯಾಗುತ್ತಿಲ್ಲ. ಆದ್ದರಿಂದ ಅವರ ಹೆಗಲಿಗೆ ನಾಯಕತ್ವದ ಜವಾಬ್ದಾರಿ ಬೀಳಲಿದೆ ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ.
ತಂಡದ ಉಪನಾಯಕನ ಜವಾಬ್ದಾರಿ ನಿರ್ವಹಿಸುತ್ತಿರುವ ಸ್ಟೋಕ್ಸ್, ರೂಟ್ ಅನುಪಸ್ಥಿತಿಯಲ್ಲಿ ತಂಡದ ಕ್ಯಾಪ್ಟನ್ ಆಗಿ ಮೈದಾನಕ್ಕಿದರೆ ಆಂಡ್ರ್ಯೂ ಫ್ಲಿಂಟಾಫ್ ಬಳಿಕ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವ ಇಂಗ್ಲೆಂಡ್ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಅವರು, ಸರಣಿಯಲ್ಲಿ ನನಗೆ ನಾಯಕತ್ವ ನೀಡಿದ್ರೂ ನನ್ನ ಸ್ಟೈಲ್ನಲ್ಲಿ ಯಾವುದೇ ರೀತಿಯ ಬದಲಾವಣೆ ಆಗಲ್ಲ. ನಾನು ಯಾವಾಗಲೂ ವರ್ತನೆ ಮತ್ತು ಬದ್ಧತೆಯ ನಡುವೆ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೇನೆ. ಇದೀಗ ನಾಯಕತ್ವದ ಜವಾಬ್ದಾರಿ ನೀಡಿದರೂ ಕಂಡುಕೊಂಡಿರುವ ಮಾರ್ಗ ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ತಂಡ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ಸ್ಟೋಕ್ಸ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 29 ವರ್ಷದ ಸ್ಟೋಕ್ಸ್, 63 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ತಂಡಕ್ಕೆ ಅನೇಕ ಸರಣಿ ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
ಇಲ್ಲಿಯವರೆಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ಅವರು ನಿರ್ವಹಿಸಿಲ್ಲ. ಆದರೆ ತಂಡದಲ್ಲಿರುವ ಹಿರಿಯ ಆಟಗಾರರೊಂದಿಗೆ ಅವರು ಈ ಕೆಲಸ ನಿರ್ವಹಿಸಬೇಕಾಗಿದ್ದು, ಯಾವ ರೀತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.