ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಆರೋಪ ಪ್ರಕರಣವನ್ನು ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದೆ.
ನ್ಯಾಯಾಧೀಶರಾದ ಸ್ಪರ್ಶಾ ಡಿಸೋಜಾ ಅವರ ಮುಂದೆ ಸಿ.ಟಿ.ರವಿ ಅವರನ್ನು ಇಂದು ಬೆಳಗ್ಗೆ ವಿಚಾರಣೆಗೆ ಹಾಜರುಪಡಿಸಲಾಯಿತು. ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ವಕೀಲರಾದ ಎಂ.ಬಿ.ಝಿರಲಿ, ರವಿರಾಜ್ ಪಾಟೀಲ್, ಸಿ.ಟಿ.ರವಿ ಪರ ವಾದ ಮಂಡಿಸಿದರು. ಸಿ.ಟಿ.ರವಿ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು ಮಧ್ಯಾಹ್ನ ಪ್ರಕಟಿಸುವುದಾಗಿ ಅವರು ತಿಳಿಸಿದರು.
ತೀರ್ಪು ಪ್ರಕಟಿಸುವ ಮೊದಲೇ ಪ್ರಕರಣವನ್ನು ನ್ಯಾಯಾಧೀಶರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದರು.
ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ಕೋರ್ಟ್ಗೆ ದೌಡಾಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ ಅವರು ಸಿ.ಟಿ.ರವಿ ಅವರ ಜೊತೆಗೆ ಸಮಾಲೋಚಿಸಿ ಧೈರ್ಯ ತುಂಬಿದರು. ನಂತರ ಹಿರೇಬಾಗೇವಾಡಿ ಠಾಣೆ ಪೊಲೀಸರು ಸಿ.ಟಿ.ರವಿ ಅವರನ್ನು ಬೆಂಗಳೂರಿಗೆ ಕರೆದೊಯ್ದರು.
ಬೆಳಗಾವಿಯ 5ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಇಂದು ಬೆಳಗ್ಗೆ ಹಾಜರಪಡಿಸಲಾಗಿತ್ತು. ಈ ವೇಳೆ "ನನ್ನನ್ನು ಯಾವ ಕಾರಣಕ್ಕೆ ಬಂಧಿಸಿದ್ದಾರೆ ಅಂತಾ ತಿಳಿಸಿಲ್ಲ. ರಾತ್ರಿಯಿಂದ ನನ್ನ ಮೇಲೆ ಮೂರು ಬಾರಿ ಹಲ್ಲೆಯಾಗಿದೆ. ನಾನು ದೂರು ಕೊಟ್ಟರೂ ಪೊಲೀಸರು ಸ್ವೀಕರಿಸಿಲ್ಲ. ಪೊಲೀಸರಿಗೆ ಪ್ರತಿ 10 ನಿಮಿಷಕ್ಕೆ ಯಾರೋ ಫೋನ್ ಮಾಡಿ ನಿರ್ದೇಶನ ನೀಡುತ್ತಿದ್ದರು ಎಂದು ನ್ಯಾಯಾಧೀಶರ ಮುಂದೆ ಸಿ.ಟಿ.ರವಿ ದೂರಿದ್ದರು.
ಧಾರವಾಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್: ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರನ್ನು ಪೊಲೀಸರು ಧಾರವಾಡ, ಹಾವೇರಿ, ದಾವಣಗೆರೆ, ಹಿರಿಯೂರು, ತುಮಕೂರು ರಸ್ತೆ ಮಾರ್ಗವಾಗಿ ಬೆಂಗಳೂರು ಕರೆದೊಯ್ಯುತ್ತಿದ್ದಾರೆ.
ಅಂತೆಯೇ ಧಾರವಾಡದ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಿ.ಟಿ.ರವಿ ಅವರಿದ್ದ ಪೊಲೀಸ್ ವಾಹನ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ರವಿ ಪರ ಘೋಷಣೆ ಕೂಗಿದರು.
ಹಾವೇರಿ: ಸಿ.ಟಿ.ರವಿ ಇದ್ದ ಪೊಲೀಸ್ ವಾಹನವನ್ನು ಹಿಂಬಾಲಿಸಲು ಬಂಕಾಪುರ ಟೋಲ್ ಬಳಿ ಹಾವೇರಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ ನೇತೃತ್ವದಲ್ಲಿ ಕಾರ್ಯಕರ್ತರು ಕಾಯುತ್ತಿದ್ದಾರೆ.
ಇನ್ನು ಮಾರ್ಗಮಧ್ಯೆ ಶಿಗ್ಗಾವಿ ಐಬಿಗೆ ಊಟಕ್ಕಾಗಿ ಸಿ.ಟಿ.ರವಿ ಅವರನ್ನು ಪೊಲೀಸರು ಕರೆದೊಯ್ದಿದ್ದರು.
ಇದನ್ನೂ ಓದಿ: ಸದನದಲ್ಲಿ ಅವಾಚ್ಯ ಪದ ಬಳಕೆ ವಿಚಾರ ಯಾರೂ ಖಂಡಿಸದೇ ಇರುವುದು ನೆನೆದು ಗದ್ಗದಿತರಾದ ಲಕ್ಷ್ಮಿ ಹೆಬ್ಬಾಳ್ಕರ್