ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಈಗಾಗಲೇ ನಿವೃತ್ತಿಯಾಗಿರುವ ಭಾರತದ ಮುನಾಫ್ ಪಟೇಲ್, ಪಾಕ್‌ನ ಶಾಹಿದ್ ಆಫ್ರಿದಿ ಸೇರಿ ಹಲವು ವಿದೇಶಿ ಆಟಗಾರರು ಸೇರಿದ್ದಾರೆ.
ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್) ಆರಂಭಿಸುತ್ತಿದೆ. ಇದಕ್ಕಾಗಿ ವಿದೇಶದ ಆಟಗಾರರು ಸೇರಿ 5 ತಂಡಗಳು ಸುಮಾರು 150 ಆಟಗಾರರಿಗಾಗಿ ಹರಾಜು ನಡೆಸಲಿದೆ. ಹರಾಜಿನಲ್ಲಿ ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಸೇರಿ ಹಲವಾರು ರಾಷ್ಟ್ರಗಳ 70ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳುವ ಸಾಧ್ಯತೆಯಿದೆ.
37 ವರ್ಷದ ಮುನಾಫ್ ಪಟೇಲ್ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರು ಭಾರತದ ಪರ 17 ಟೆಸ್ಟ್, 709 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2006ರಲ್ಲಿ ಪದಾರ್ಪಣೆ ಮಾಡಿದ್ದ ಅವರು 2011ರ ಏಕದಿನ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ನಿವೃತ್ತಿ ನಂತರ ಟಿ10 ಲೀಗ್ನಲ್ಲಿ ಆಡಿದ್ದ ಮುನಾಫ್ ಇದೀಗ ಮತ್ತೊಂದು ಲೀಗ್ನಲ್ಲಿ ಆಡಲು ಉತ್ಸುಕರಾಗಿದ್ದಾರೆ.
ಎಲ್ಪಿಎಲ್ನಲ್ಲಿ 5 ತಂಡಗಳಿರಲಿದ್ದು, ಪ್ರತಿ ತಂಡಗಳು 6 ವಿದೇಶಿ ಆಟಗಾರರನ್ನು ಖರೀದಿಸಬಹುದಾಗಿದೆ. ಒಟ್ಟಾರೆ 30 ವಿದೇಶಿ ಆಟಗಾರರು ಟೂರ್ನಿಯ ಭಾಗವಾಗಲಿದ್ದಾರೆ. ಒಟ್ಟು 65 ದೇಶಿ ಆಟಗಾರರಿಗೆ ಅವಕಾಶವಿದೆ. ಪ್ರತಿ ತಂಡದಲ್ಲೂ 19 ಆಟಗಾರರನ್ನು ಮಾತ್ರ ಒಳಗೊಂಡಿರಬೇಕು.
ಅಕ್ಟೋಬರ್ 1ರಂದು ಎಲ್‌ಪಿಎಲ್‌ನ ಆಟಗಾರರ ಹರಾಜು ನಡೆಯಲಿದೆ. ಕ್ರಿಸ್ ಗೇಲ್, ಶಕಿಬ್ ಅಲ್ ಹಸನ್, ಡರೇನ್ ಸಾಮಿ, ಶಾಹಿದ್ ಆಫ್ರಿದಿ, ವೆರ್ನಾನ್ ಫಿಲಾಂಡರ್, ಕಾಲಿನ್ ಮನ್ರೋ, ರವಿ ಬೊಪೆರಾ, ಡರೇನ್ ಬ್ರಾವೋ ಪ್ರಮುಖ ವಿದೇಶಿ ಆಟಗಾರರಾಗಿದ್ದಾರೆ.