ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ‘ಮೈಥಲಾಜಿಕಲ್ ಸೈ-ಫೈ’ ವೆಬ್ ಸರಣಿಯನ್ನು ಮಾಹಿ ನಿರ್ಮಿಸಲಿದ್ದಾರೆ.
ಕಳೆದ ವರ್ಷ ತಮ್ಮ ಮಾಧ್ಯಮ ಸಂಸ್ಥೆ ಧೋನಿ ಎಂಟರ್ಟೈನ್ಮೆಂಟ್ ಆರಂಭಿಸಿದ್ದರು. 2019ರಲ್ಲಿ ಕಬೀರ್ ಖಾನ್ ನಿರ್ದೆಶಿಸಿದ ‘ರೋರ್ ದ ಲಯನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ಈಗ ವೆಬ್ ಸಿರೀಸ್ ನಿರ್ಮಿಸುತ್ತಿದ್ದಾರೆ.
ಮುಂಬರಲಿರುವ ವೆಬ್ ಸರಣಿಯು ರೋಚಕ ಕಥೆಯಿಂದ ಕೂಡಿದೆ. ಇದು ಅಘೋರಿ ಸಾಧುವೊಬ್ಬರ ನಿಗೂಢ ಜೀವನ ಪಯಣದ ಕುರಿತ ಚಿತ್ರವಾಗಿದೆ. ಲೇಖಕರೊಬ್ಬರು ಬರೆದಿರುವ ಮೊದಲ ಕೃತಿಯಿಂದ ಈ ಕಥೆ ತೆಗೆದುಕೊಳ್ಳಲಾಗಿದೆ. ಈ ಚಿತ್ರಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಚಿತ್ರೀಸಲಾಗುತ್ತಿದೆ ಎಂದು ಧೋನಿ ಎಂಟರ್ಟೈನ್ಮೆಂಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಾಕ್ಷಿ ಸಿಂಗ್ ಹೇಳಿದ್ದಾರೆ.
ಅಘೋರಿಯು ಈ ಚಿತ್ರದಲ್ಲಿ ಬಹಿರಂಗಗೊಳಿಸುವ ಕೆಲವು ರಹಸ್ಯಗಳು ಕುತೂಹಲಕಾರಿಯಾಗಿವೆ. ತಲೆತಲಾಂತರದಿಂದ ನಂಬಿಕೊಂಡ ಬಂದ ಸಂಪ್ರದಾಯಗಳನ್ನು ಮೂಢನಂಬಿಕೆಗಳೆಂದು ಪ್ರತಿಪಾದಿಸುತ್ತಾರೆ. ಒಂದು ಸಾಮಾನ್ಯ ಚಿತ್ರಕ್ಕಿಂತ ಅಗೋಚರವಾದ ಸತ್ಯಗಳನ್ನು ಜನರ ಮುಂದಿಡುವ ಉದ್ದೇಶ ಈ ವೆಬ್ ಸಿರೀಸ್ನದ್ದಾಗಿದೆ ಎಂದು ಧೋನಿ ಪತ್ನಿ ಸಾಕ್ಷಿ ಸಿಂಗ್ ಹೇಳಿದ್ದಾರೆ.