ನವದೆಹಲಿ: 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಂಡ ಬಳಿಕ ಮಹೇಂದ್ರ ಸಿಂಗ್ ಧೋನಿ ಮೈದಾನಕ್ಕಿಳಿದಿಲ್ಲ. ಆದರೆ ಐಪಿಎಲ್ನಲ್ಲಿ ಅಬ್ಬರಿಸಲು ತಯಾರಿ ನಡೆಸ್ತಿದ್ದಾಗಲೇ ಟೂರ್ನಿ ಮುಂದೂಡಿಕೆಯಾದ ಕಾರಣ ಅವರು ತಂಡದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವುದು ಬಹುತೇಕ ಡೌಟ್ ಎಂಬ ಮಾತು ಎಲ್ಲೆಡೆಯಿಂದ ಗಂಭೀರವಾಗಿ ಕೇಳಿ ಬರಲು ಆರಂಭಿಸಿದ್ದವು. ಇದೀಗ ಇದೇ ವಿಷಯವಾಗಿ ಗೌತಮ್ ಗಂಭೀರ್ ಮಾತನಾಡಿದ್ದಾರೆ.
ವಯಸ್ಸು ಕೇವಲ ಒಂದು ಸಂಖ್ಯೆ. ಧೋನಿ ಫಿಟ್ ಆಗಿರುವವರೆಗೆ ಮತ್ತು ಕ್ರೀಡೆ ಆನಂದಿಸುವವರೆಗೂ ಕ್ರಿಕೆಟ್ ಆಡಬೇಕು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಗಂಭೀರ್, ಧೋನಿ ಉತ್ತಮ ಫಾರ್ಮ್ನಲ್ಲಿದ್ದು, ಆಟ ಆನಂದಿಸುತ್ತಿದ್ದರೆ, ಜತೆಗೆ ದೇಶಕ್ಕಾಗಿ ಪಂದ್ಯ ಗೆಲ್ಲಬಹುದು ಎಂದ ವಿಶ್ವಾಸವಿದ್ದರೆ ನಿವೃತ್ತಿ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಅವರ ಮೇಲೆ ಹೆಚ್ಚಿನ ಒತ್ತಡ ಬೀರಬಹುದು. ಆದರೆ ಇದು ಅವರ ವೈಯಕ್ತಿಕ ನಿರ್ಧಾರ. ನೀವು ಕ್ರಿಕೆಟ್ ಆಡಲು ಪ್ರಾರಂಭಿಸಿದ್ದು ವೈಯಕ್ತಿಕ ನಿರ್ಧಾರವಾಗಿದ್ದು, ನಿವೃತ್ತಿ ಘೋಷಣೆ ಮಾಡುವುದು ವೈಯಕ್ತಿಕ ನಿರ್ಧಾರ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುನ್ನಡೆಸಲಿರುವ ಧೋನಿ, ಅದರಲ್ಲಿ ನೀಡುವ ಪ್ರದರ್ಶನದ ಮೇಲೆ ಅವರ ಕಮ್ಬ್ಯಾಕ್ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಸೆಪ್ಟೆಂಬರ್ 19ರಿಂದ ದುಬೈನಲ್ಲಿ ಮಹಾಟೂರ್ನಿ ಆರಂಭಗೊಳ್ಳಲಿದೆ.