ನವದೆಹಲಿ: ಟೀಂ ಇಂಡಿಯಾ ಕಂಡಿರುವ ಶ್ರೇಷ್ಠ ಕ್ಯಾಪ್ಟನ್ಗಳ ಪೈಕಿ ಮಹೇಂದ್ರ ಸಿಂಗ್ ಧೋನಿ ಮೊದಲನೇ ಸಾಲಿನಲ್ಲಿ ನಿಂತುಕೊಳ್ಳುತ್ತಾರೆ. 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ಸೋತ ನಂತರ ಮೈದಾನದಲ್ಲಿ ಕಾಣಿಸಿಕೊಳ್ಳದ ಮಹೇಂದ್ರ ಸಿಂಗ್ ಧೋನಿ ಇದೀಗ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಸದ್ಯ ಯಾವುದೇ ರೀತಿಯ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುತ್ತಿಲ್ಲ. ಬದಲಿಗೆ ಪರಿಸರ ಸ್ನೇಹಿ ರಸಗೊಬ್ಬರ ಪರಿಚಯಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಂಚಿಯಲ್ಲಿ ಇದೀಗ ಕಾಲ ಕಳೆಯುತ್ತಿರುವ ಎಂಎಸ್ ಧೋನಿ, 40ರಿಂದ 50 ಎಕರೆ ಕೃಷಿ ಭೂಮಿ ಹೊಂದಿದ್ದು, ಅಲ್ಲಿ ಪಪ್ಪಾಯಿ, ಬಾಳೆ ಹಣ್ಣು ಸೇರಿದಂತೆ ವಿವಿಧ ಬೆಳೆ ಬೆಳೆಯಲು ನಿರ್ಧರಿಸಿದ್ದಾರೆ ಎಂದು ಅವರ ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ಮಾಹಿತಿ ನೀಡಿದ್ದಾರೆ.
ದೇಶಭಕ್ತಿ ಧೋನಿ ರಕ್ತದಲ್ಲಿದ್ದು, ಈಗಾಗಲೇ ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ಅವರು ಇದೀಗ ಕೃಷಿ ಸೇವೆಗಾಗಿ ನಿರ್ಧರಿಸಿದ್ದು, ಅದರ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಅವರ ಜಮೀನಿನಲ್ಲಿ ರಸಗೊಬ್ಬರ ಪರೀಕ್ಷೆ ಕೆಲಸ ನಡೆದಿದೆ ಎಂದು ತಿಳಿಸಿದ್ದಾರೆ.
ಈ ಹಿಂದಿನ ರೀತಿಯಲ್ಲಿ ಜನ ಜೀವನ ಸಹಜಸ್ಥಿತಿಗೆ ಮರಳುವವರೆಗೆ ಯಾವುದೇ ರೀತಿಯ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕದಿರಲು ಅವರು ನಿರ್ಧರಿಸಿದ್ದು, ಸದ್ಯದಲ್ಲಿಯೇ ಸಾವಯವ ರಸಗೊಬ್ಬರ ಪರಿಚಯಿಸಲಿದ್ದಾರೆ ಎಂದು ಹೇಳಿದ್ದಾರೆ.