ಸಿಡ್ನಿ: ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ತಂತ್ರಗಾರಿಕೆಯಲ್ಲಿ ರಿಕಿ ಪಾಂಟಿಂಗ್ಗಿಂತಲೂ ಉತ್ತಮ ನಾಯಕ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಮೈಕ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.
ರಿಕಿ ತುಂಬಾ ಸ್ಪರ್ಧಾತ್ಮಕವಾಗಿ ಆಡುತ್ತಾರೆ. ಅವರು ತಂಡದ ರೂಮ್ನಲ್ಲಿ ಟೇಬಲ್ ಟೆನ್ನಿಸ್ ಆಡಿದರೂ ಅಥವಾ ಗೋಲಿ ಆಟ ಆಡಿದರೂ ಗೆಲ್ಲಲು ಬಯಸುತ್ತಾರೆ. ನೀವು ಫೀಲ್ಡಿಂಗ್ ಡ್ರಿಲ್ ಮಾಡುವಾಗಲೂ ಅವರೇ ನಾಯಕತ್ವ ನಿರ್ವಹಿಸಲು ಬಯಸುತ್ತಾರೆ. ಹಾಗೂ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬಯಸುತ್ತಾರೆ ಎಂದು ರಾನಕ್ ಕಪೂರ್ ನಡೆಸಿದ ಯೂಟ್ಯೂಬ್ ಸಂದರ್ಶನದಲ್ಲಿ ಹಸ್ಸಿ ತಿಳಿಸಿದ್ದಾರೆ.
ಆಸ್ಟ್ರೇಲಿಯದ ಕ್ರಿಕೆಟಿಗ ಹಸ್ಸಿ, ಧೋನಿ ಹಾಗೂ ರಿಕಿ ಪಾಂಟಿಂಗ್ ವಿಭಿನ್ನ ರೀತಿಯ ನಾಯಕರಾಗಿದ್ದಾರೆ. ಆದರೆ ಆಟಗಾರರನ್ನು ಬೆಂಬಲಿಸುವಾಗ ತಮ್ಮದೇ ಆದ ರೀತಿಯಲ್ಲಿ ಪರಿಣಾಮಕಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ನಾವೇನಾದರೂ ಅಭ್ಯಾಸ ಮಾಡಲು ಕೆಟ್ಟ ನೆಟ್ ಹೊಂದಿದ್ದೇವೆ ಎಂದಾದರೆ ರಿಕಿ ತಾವೇ ಮೊದಲು ಹೋಗಿ ಅದನ್ನು ಪರೀಕ್ಷಿಸುತ್ತಾರೆ. ಬಳಿಕ ಸರಿಯಿದೆ ಎಂದು ತೋರಿಸಿ ತಂಡವನ್ನು ಮುಂದೆ ನಿಂತು ನಡೆಸುತ್ತಾರೆ. ಅವರು ಖಂಡಿತವಾಗಿಯೂ ತನ್ನ ಆಟಗಾರರನ್ನು ಶೇ100ರಷ್ಟು ಬೆಂಬಲಿಸುತ್ತಾರೆ. ಇದರಲ್ಲಿ ರಿಕಿ ಹಾಗೂ ಎಂ.ಎಸ್ ನಡುವೆ ತುಂಬಾ ಹೋಲಿಕೆಯಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಧೋನಿ ಸಾಕಷ್ಟು ತಾಳ್ಮೆಯಿಂದಿದ್ದು ಪಂದ್ಯವನ್ನು ಹೆಚ್ಚು ಅಳೆಯುತ್ತಾರೆ. ಅವರು ರಿಕಿಗಿಂತ ಆಟದ ಬಗ್ಗೆ ಉತ್ತಮವಾಗಿ ಚಿಂತಿಸುತ್ತಾರೆ. ತಂತ್ರಗಾರಿಕೆಯ ವಿಚಾರದಲ್ಲಿ ರಿಕಿ ಕೂಡ ಉತ್ತಮ ಹಾಗೂ ಅದ್ಭುತವಾಗಿದ್ದಾರೆ. ಆದರೆ ಎಂ.ಎಸ್ ಆಟದ ನಡುವೆ ಮೈದಾನದಲ್ಲಿ ಮಾಡುವ ಕೆಲವು ಚಲನೆಗಳು ಉತ್ತವಾಗಿರುತ್ತದೆ. ಅವರು ತಮ್ಮ ಉಪಾಯಗಳಿಂದ ಎಲ್ಲಿಗೆ ಹೋಗುತ್ತಿದ್ದಾರೆ? ಅವರ ತಂತ್ರಗಾರಿಗೆ ಯಶಸ್ವಿಯಾಗಿ ಕೆಲಸ ಮಾಡುತ್ತದೆ. ಆದರಿದು ಅವರ ತಲೆಗೆ ಹೇಗೆ ಬಂತು? ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ. ಏನೇ ಆದರೂ ಧೋನಿ ತಮ್ಮ ಭಾವನೆಯ ಹಿಂದಿರುತ್ತಾರೆ ಎಂದು ಹಸ್ಸಿ ವಿವರಿಸಿದ್ದಾರೆ.