ಲಾಹೋರ್: 16 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ದಾಖಲೆ ಬರೆದಿರುವ ನಸೀಮ್ ಶಾರನ್ನು ಅಂಡರ್ 19 ವಿಶ್ವಕಪ್ನಲ್ಲಿ ಆಡುವುದಕ್ಕೆ ಅವಕಾಶ ನೀಡಬಾರದು ಎಂದು ಪಾಕಿಸ್ತಾನ ತಂಡದ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಪಿಸಿಬಿಗೆ ಮನವಿ ಮಾಡಿದ್ದಾರೆ.
ಈಗಾಗಲೆ ನಸೀಮ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾಲ್ಗೊಂಡು ಅವರ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಉನ್ನತ ಮಟ್ಟದ ಕ್ರಿಕೆಟ್ ಆಡಿರುವ ಅವರನ್ನು ಮತ್ತೆ ಕಿರಿಯರ ತಂಡದ ಪರ ಆಡಲು ಅನುಮತಿ ನೀಡಬಾರದು. ಬದಲಾಗಿ ಅವರಿಗೆ ಕಠಿಣ ತರಬೇತಿ ನೀಡಿ ಉನ್ನತ ಮಟ್ಟದ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತಷ್ಟು ಅವಕಾಶಗಳನ್ನು ಕೊಡಬೇಕು ಎಂದು ಹಿರಿಯ ಆಲ್ರೌಂಡರ್ ತಿಳಿಸಿದ್ದಾರೆ.
ನಸೀಮ್ ಶಾ ಪಾಕಿಸ್ತಾನ ಸೀನಿಯರ್ ತಂಡದ ಪರ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ್ದರು. ಇತ್ತೇಚೆಗೆ ಮುಗಿದ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಬೌಲರ್ ಎನಿಸಿಕೊಂಡಿದ್ದರು.
ಇದೀಗ ಮತ್ತೆ ಅವರನ್ನು ಮುಂದಿನ ತಿಂಗಳು ನಡೆಯುವ ಅಂಡರ್ 19 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿರುವುದು ಸಮಂಜಶವಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಅವರನ್ನು ದೈಹಿಕ ಮತ್ತು ತಾಂತ್ರಿಕವಾಗಿ ಕಠಿಣ ತರಬೇತಿಗೆ ಒಳಪಡಿಸಬೇಕು. ಅವರ ಜಾಗಕ್ಕೆ ಮತ್ತೊಬ್ಬ ಯುವ ವೇಗಿಯನ್ನು ಅಂಡರ್ 19 ತಂಡಕ್ಕೆ ಮಾಡಿ ಎಂದು ಹಫೀಜ್ ಪಿಸಿಬಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.