ಕೋಲ್ಕತ್ತಾ: ಮುಂದಿನ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಎಲ್ಲ ಪ್ರಾಂಚೈಸಿ ಈಗಿನಿಂದಲೇ ತಯಾರಿ ನಡೆಸಿದ್ದು, ತಮ್ಮ ತಮ್ಮ ತಂಡ ಬಲಿಷ್ಠ ಮಾಡಲು ಯೋಜನೆ ರೂಪಿಸಿಕೊಳ್ಳುತ್ತಿವೆ. ಇದರ ಮಧ್ಯೆ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪೋಟಕ ಬ್ಯಾಟ್ಸ್ಮನ್ಗೆ ಮಣೆ ಹಾಕಿದೆ ಎಂದು ತಿಳಿದು ಬಂದಿದೆ.
ನ್ಯೂಜಿಲ್ಯಾಂಡ್ ಕ್ರಿಕೆಟ್ನ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಬ್ರೆಂಡನ್ ಮೆಕಲಂಗೆ ತಂಡದ ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಳ್ಳಲು ಕೆಕೆಆರ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಪ್ರಾಂಚೈಸಿ ಪ್ರಕಟಣೆ ಸಹ ಹೊರಡಿಸಲಿದೆ ಎನ್ನಲಾಗಿದೆ. 2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ಈ ಪ್ಲೇಯರ್ ವಿವಿಧ ದೇಶಗಳಲ್ಲಿ ನಡೆಯುವ ಚುಟುಕು ಕ್ರಿಕೆಟ್ನಲ್ಲಿ ಭಾಗಿಯಾಗುತ್ತಿದ್ದಾರೆ.
ಈಗಾಗಲೇ ತಂಡದ ಮುಖ್ಯ ಕೋಚ್ ಆಗಿ ದಕ್ಷಣ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲಿಸ್ ಹಾಗೂ ಆಸ್ಟ್ರೇಲಿಯಾದ ಸೈಮನ್ ಕಾಟಿಚ್ ಕಾರ್ಯನಿರ್ವಹಿಸುತ್ತಿದ್ದಾರೆ. ಸೈಮನ್ ಕಾಟಿಚ್ ಸ್ಥಾನಕ್ಕೆ ಮೆಕಲಂ ಆಯ್ಕೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ 2008ರಲ್ಲಿ ಬ್ರೆಂಡನ್ ಮೆಕಲಂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಬ್ಯಾಟ್ ಬೀಸಿರುವ ಅನುಭವ ಹೊಂದಿದ್ದಾರೆ. ಜತೆಗೆ 2009ರ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 158ರನ್ಗಳಿಸಿದ್ದರು. ಕಿವೀಸ್ ತಂಡದ ಪರ 260 ಏಕದಿನ ಪಂದ್ಯಗಳನ್ನಾಡಿರುವ ಈ ಪ್ಲೇಯರ್ 6,083 ರನ್,101 ಟೆಸ್ಟ್ ಪಂದ್ಯಗಳಿಂದ 6,453 ರನ್ ಕಲೆಹಾಕಿದ್ದಾರೆ. 302ರನ್ಗಳಿಸಿರುವುದು ಇವರ ಟೆಸ್ಟ್ನ ಅತಿ ದೊಡ್ಡ ಸ್ಕೋರ್ ಆಗಿದೆ.