ಪುಣೆ: ಭಾರತ ಕ್ರಿಕೆಟ್ ತಂಡ ಕಂಡ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ 10 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕ ಸಿಡಿಸಿದ್ದರು. ಇದೀಗ ಆರಂಭಿಕನಾಗಿರುವ ಮಯಾಂಕ್ ಕೂಡ ಸತತ ಎರಡು ಟೆಸ್ಟ್ ಪಂದ್ಯಗಳಲ್ಲೂ ಶತಕ ಸಿಡಿಸಿ ಸೆಹ್ವಾಗ್ ಸಾಧನೆಯನ್ನು ಪುನರಾವರ್ತಿಸಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ ಪೇಟಿಎಂ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಮಯಾಂಕ್ ಆಕರ್ಷಕ ಶತಕ ದಾಖಲಿಸಿ ಔಟಾಗಿದ್ದಾರೆ. ಸೆಹ್ವಾಗ್ ರೀತಿಯೇ ಬ್ಯಾಟ್ ಬೀಸುತ್ತಿರುವ ಮಯಾಂಕ್ 87 ರನ್ಗಳಿಸಿದ್ದ ವೇಳೆ ಸತತ 2 ಸಿಕ್ಸರ್ ಸಿಡಿಸಿದರಲ್ಲದೇ ನಂತರದ ಓವರ್ನಲ್ಲಿ ಬೌಂಡರಿ ಸಿಡಿಸಿ ಶತಕ ಪೂರೈಸಿದ್ರು.
2009/10ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಸೆಹ್ವಾಗ್ 109 ರನ್ ಹಾಗೂ ಎರಡನೇ ಟೆಸ್ಟ್ನಲ್ಲಿ165 ರನ್ ಗಳಿಸಿದ್ದರು. ಇದೀಗ ಮಯಾಂಕ್ ಕೂಡ ಮೊದಲ ಟೆಸ್ಟ್ನಲ್ಲಿ 215 ಹಾಗೂ ಎರಡನೇ ಟೆಸ್ಟ್ನಲ್ಲಿ 108 ರನ್ ಗಳಿಸಿದ್ದಾರೆ.
ರೋಹಿತ್ ಜೊತೆಗೂಡಿ ಒಂದೇ ಸರಣಿಯಲ್ಲಿ ಗರಿಷ್ಠ ಶತಕ(4) ಸಿಡಿಸಿ ದಾಖಲೆ ಬರೆದಿರುವ ಮಯಾಂಕ್ ಆಕ್ರಮಣ ಆಟವನ್ನು ಮೈಗೂಡಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾದ ಆರಂಭಿಕ ಸ್ಥಾನದ ವೈಫಲ್ಯವನ್ನು ತೊಡೆದು ಹಾಕಿದ್ದಾರೆ.
ಭಾರತ ತಂಡದ ಪರ 6ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮಯಾಂಕ್ 10 ಇನ್ನಿಂಗ್ಸ್ನಲ್ಲಿ 60.50 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದು 605 ರನ್ ಕಲೆ ಹಾಕಿದ್ದಾರೆ.