ಕೋಲ್ಕತ್ತಾ: ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸುತ್ತಿರುವ ಕರ್ನಾಟಕದ ರನ್ ಮಷಿನ್ ಮಯಾಂಕ್ ಅಗರವಾಲ್ ಈಗಾಗಲೇ 8 ಪಂದ್ಯಗಳಿಂದ 71.50ರ ಸರಾಸರಿಯಲ್ಲಿ ಮೂರು ಶತಕ ಹಾಗೂ ಎರಡು ದ್ವಿಶತಕ ಸಿಡಿಸಿ ಮಿಂಚಿದ್ದು, ಇಂದಿನಿಂದ ಆರಂಭಗೊಳ್ಳಲಿರುವ ಹಗಲು-ರಾತ್ರಿ ಪಂದ್ಯದಲ್ಲಿ ಹೊಸದೊಂದು ದಾಖಲೆ ಸರಿಗಟ್ಟಲು ಸಜ್ಜುಗೊಂಡಿದ್ದಾರೆ.
ಈಡನ್ ಗಾರ್ಡನ್ ಮೈದಾನದಲ್ಲಿ ಇಂದಿನಿಂದ ಬಾಂಗ್ಲಾ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭಗೊಳ್ಳುತ್ತಿದ್ದು, ಈ ಪಂದ್ಯದಲ್ಲಿ ಆರಂಭಿಕ ಮಯಾಂಕ್ ಅಗರವಾಲ್ 142ರನ್ಗಳಿಕೆ ಮಾಡಿದ್ರೆ ಕೇವಲ 13 ಇನ್ನಿಂಗ್ಸ್ಗಳಿಂದ 1000 ರನ್ಗಳಿಕೆ ಮಾಡುವ ಸಾಧನೆ ಮಾಡಲಿದ್ದು, ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆ ಸಮಗೊಳಿಸಲಿದ್ದಾರೆ.
ಬಾಂಗ್ಲಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿರುವ ಮಯಾಂಕ್ ಈಗಾಗಲೇ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 11ನೇ ಸ್ಥಾನಕ್ಕೆ ಲಗ್ಗೆಹಾಕಿದ್ದು, ಇಂದಿನಿಂದ ಆರಂಭಗೊಳ್ಳಲಿರುವ ಪಂದ್ಯದಲ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸುವ ಇರಾದೆಯಲ್ಲಿದ್ದಾರೆ.
ಈಗಾಗಲೇ ಇಂಗ್ಲೆಂಡ್ ಪ್ಲೇಯರ್ ಹೆಚ್ ಸ್ಯುಟ್ಕ್ಲೀಪ್ 12 ಇನ್ನಿಂಗ್ಸ್ಗಳಿಂದ, ವೆಸ್ಟ್ ಇಂಡೀಸ್ನ ಇಡಿ ವಿಕ್ಸ್ 12 ಇನ್ನಿಂಗ್ಸ್, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 13 ಇನ್ನಿಂಗ್ಸ್ ಹಾಗೂ ಆರ್ಎನ್ ಹರ್ವಿ 14 ಇನ್ನಿಂಗ್ಸ್ಗಳಿಂದ 1000 ರನ್ಗಳಿಕೆ ಮಾಡಿದ್ದಾರೆ.