ಸೌತಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಚೊಚ್ಚಲ ಐಸಿಸಿ ಟೆಸ್ಟ್ ವಿಶ್ವಚಾಂಪಿಯನ್ಶಿಪ್ ಫೈನಲ್ ಪಂದ್ಯ ಸೌತಂಪ್ಟನ್ನ ಹ್ಯಾಪ್ಶೈರ್ ಬೌಲ್ನಲ್ಲಿ ನಡೆಯಲಿದೆ.
ಈ ಐತಿಹಾಸಿಕ ಪಂದ್ಯ ಜೂನ್ 18ರಿಂದ 22ರವರೆಗೆ ಆಯೋಜನೆಯಾಗಿದ್ದು, 23 ರಂದು ಪಂದ್ಯಕ್ಕೆ ರಿಸರ್ವ್ ಡೇ ಆಗಿದೆ. ಅಲ್ಲದೆ ಈ ಪಂದ್ಯಕ್ಕೆ ಕೋವಿಡ್ 19 ಭೀತಿಯಿಂದ ಸೀಮಿತ ಪ್ರೇಕ್ಷಕರಿಗೆ ಅವಕಾಶ ನೀಡಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿದೆ.
ಐಸಿಸಿ ಮಂಡಳಿ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಜೊತೆಗೆ ನಡೆಸಿರುವ ಚರ್ಚೆಯನುಸಾರ ಉದ್ಘಾಟನಾ ಫೈನಲ್ ಪಂದ್ಯವನ್ನು ಸುರಕ್ಷಿತವಾಗಿ ನಡೆಸಲು ಚಿಂತನೆ ನಡೆಸಲಾಗಿದೆ.
2020ರಲ್ಲಿ ಇಸಿಬಿ ಬಯೋಬಬಲ್ ನಿರ್ಮಿಸಿ ಪ್ರಮುಖ ಅಂತಾರಾಷ್ಟ್ರೀಯ ಸರಣಿಯನ್ನು ಹ್ಯಾಂಪ್ಶೈರ್ ಬೌಲ್ನಲ್ಲಿ ನಡೆಸಿ ಯಶಸ್ವಿಯಾಗಿರುವುದರಿಂದ ಐಸಿಸಿ ಲಾರ್ಡ್ಸ್ ಬದಲಾಗಿ ಫೈನಲ್ ಪಂದ್ಯಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿದೆ. ಈ ಸ್ಥಳವು ವಿಶ್ವಮಟ್ಟದ ಆಟ ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸುತ್ತದೆ. ಎರಡೂ ತಂಡಗಳ ಪೂರ್ವ ತಯಾರಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಲಿದೆ. ಜೊತೆಗೆ ಕೋವಿಡ್ 19 ಹರಡುತ್ತಿರುವ ಈ ಸಂದರ್ಭದಲ್ಲಿ ಈ ಸ್ಥಳ ಆಟಗಾರರ ಸುರಕ್ಷತೆಗೆ ಅತ್ಯುತ್ತಮವಾಗಿದೆ ಎಂದು ತಿಳಿದುಬಂದಿದೆ.
ಯುಕೆ ಸರ್ಕಾರ ಕೋವಿಡ್ 19 ಲಾಕ್‌ಡೌನ್ ಅನ್ನು ಹಂತಹಂತವಾಗಿ ಸಡಿಲಗೊಳಿಸುತ್ತಿದೆ. ಹಾಗಾಗಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಸೀಮಿತ ಸಂಖ್ಯೆಯ ಅಭಿಮಾನಿಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎಂದು ತಿಳಿದುಬಂದಿದೆ.
ನ್ಯೂಜಿಲ್ಯಾಂಡ್ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದರೆ, ಭಾರತ ತಂಡ ಕಳೆದ ವಾರ ಇಂಗ್ಲೆಂಡ್ ತಂಡದ ವಿರುದ್ಧ 3-1ರಲ್ಲಿ ಟೆಸ್ಟ್ ಸರಣಿ ಗೆದ್ದು ಫೈನಲ್ ಪ್ರವೇಶಿಸಿದೆ.
ಇದನ್ನು ಓದಿ:'ಮುಂಬರುವ ಟಿ20 ವಿಶ್ವಕಪ್ ತಯಾರಿಗೆ ಐಪಿಎಲ್ ನೆರವಾಗಲಿದೆ'