ಬ್ರಿಸ್ಬೇನ್: ಗಾಯದಿಂದ ತೀವ್ರ ತೊಂದರೆ ಅನುಭವಿಸಿದ್ದ ಹಾಗೂ ಅನನುಭವಿ ಆಟಗಾರರನ್ನು ಒಳಗೊಂಡ ಭಾರತ ತಂಡದ ವಿರೋಚಿತ ಪ್ರದರ್ಶನ ಆಸ್ಟ್ರೇಲಿಯಾ ಕೋಚ್ ನಿದ್ದೆಗೆಡಿಸಿದೆ. ಈ ಸರಣಿಯ ಸೋಲು ನಮಗೆ ದೊಡ್ಡ ಪಾಠ ಕಲಿಸಿದ್ದು, ಎಂದೆಂದಿಗೂ ಭಾರತ ತಂಡವನ್ನು ಕಡೆಗಣಿಸಬಾರದು ಎಂದು ಅವರು ಹೇಳಿದ್ದಾರೆ.
ಇದು ನಂಬಲಾಗದ ಟೆಸ್ಟ್ ಸರಣಿ. ಕೊನೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ಈ ದಿನ ಟೆಸ್ಟ್ ಕ್ರಿಕೆಟ್ ಗೆದ್ದಿದೆ. ಈ ಸೋಲಿನ ನೋವು ನಮ್ಮನ್ನು ದೀರ್ಘಕಾಲ ಕಾಡಲಿದೆ. ಭಾರತ ಖಂಡಿತ ಗೆಲುವಿನ ಶ್ರೇಯಕ್ಕೆ ಅರ್ಹವಾಗಿದೆ. ಅವರು ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ನಾವು ಇದರಿಂದ ದೊಡ್ದ ಪಾಠ ಕಲಿತಿದ್ದೇವೆ ಎಂದು ಲ್ಯಾಂಗರ್ ಚಾನೆಲ್ 7 ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.
ಮೊದಲನೆಯದಾಗಿ ಎಂದಿಗೂ ನಾವು ಏನನ್ನೂ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎರಡನೆಯದು ಎಂದೆಂದಿಗೂ, ಭಾರತೀಯರನ್ನು ಕಡೆಗಣಿಸಿ ನೋಡಬಾರದು. ಅಲ್ಲಿ 1.5 ಬಿಲಿಯನ್ ಭಾರತೀಯರಿದ್ದಾರೆ. ಅಷ್ಟು ಜನರಲ್ಲಿ ಆಯ್ಕೆಯಾಗಿ ಬಂದ 11 ಮಂದಿ ವಿರುದ್ಧ ಆಡುವುದಾದರೆ ನಿಜವಾಗಿಯೂ ಕಠಿಣವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ
ನಾನು ಭಾರತವನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮೊದಲನೇ ಪಂದ್ಯದಲ್ಲಿ 36 ರನ್ಗಳಿಗೆ ಆಲೌಟ್ ಮಾಡಿ ನಾವು ಮೂರು ದಿನಗಳಲ್ಲಿ ಪಂದ್ಯ ಗೆದ್ದುಕೊಂಡರೂ ಅವರೂ ಕುಗ್ಗಲಿಲ್ಲ. ನಂತರ ಅವರು ಪುಟಿದೆದ್ದ ಹೋರಾಟ ನಡೆಸಿದ ಹಾದಿ ರೋಚಕವಾಗಿತ್ತು. ಆ ಶ್ರೇಯ ಅವರಿಗೇ ಸಲ್ಲಬೇಕು. ಯಾವುದನ್ನೂ ಹಗುರವಾಗಿ ಪರಿಗಣಿಸಬಾರದೆಂಬ ದೊಡ್ಡ ಪಾಠವನ್ನು ನಾವು ಕಲಿತಿದ್ದೇವೆ ಅವರು ಹೇಳಿದ್ದಾರೆ.
89 ರನ್ಗಳಿಸಿ ಪಂದ್ಯ ಗೆಲ್ಲಲು ನೆರವಾದ ರಿಷಭ್ ಪಂತ್ರ ಆಟ ನಮಗೆ 2019ರಲ್ಲಿ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಸಿಡಿಸಿದ ಅಜೇಯ ಶತಕದಾಟವನ್ನು ನೆನಪಿಸಿತು ಎಂದು ಲ್ಯಾಂಗರ್ ತಿಳಿಸಿದರು.
ಇದನ್ನೂ ಓದಿ:ಅಂತಿಮ ಘಟ್ಟದಲ್ಲಿ ಪಂತ್ ಗಳಿಸಿದ ಒಂದೊಂದು ರನ್ ಚಿನ್ನಕ್ಕೆ ಸಮ: ಟಿಮ್ ಪೇನ್