ಹೈದರಾಬಾದ್: ಎರಡು ವಾರಗಳ ಹಿಂದೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಕಿಂಗ್ಸ್ ಇಲೆವೆನ್ ತಂಡದಲ್ಲಿರುವ ಕರ್ನಾಟಕದ ಬ್ಯಾಟ್ಸ್ಮನ್ ಕರುಣ್ ನಾಯರ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ಅವರು ಯುಎಇಗೆ ತಂಡದ ಫ್ರಾಂಚೈಸಿ ಜೊತೆಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗಳಲ್ಲೊಂದು ಐಪಿಎಲ್ ಪಂದ್ಯಾವಳಿ ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಹೀಗಾಗಿ, ಎಲ್ಲಾ ಫ್ರಾಂಚೈಸಿಗಳು ಆಗಸ್ಟ್ 20 ಅಥವಾ 21ರಂದು ದೂರದೂರಿಗೆ ಪ್ರಯಾಣ ಬೆಳಸಲಿವೆ.
ವರದಿಗಳ ಪ್ರಕಾರ, ಎರಡು ವಾರಗಳ ಹಿಂದೆ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಪಡೆದಿದ್ದ ನಾಯರ್ ಕ್ವಾರಂಟೈನ್ ನಂತರ ಆಗಸ್ಟ್ 8ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. ಬಿಸಿಸಿಐ ಪ್ರೋಟೋಕಾಲ್‌ಗಳ ಪ್ರಕಾರ, 28 ವರ್ಷದ ಈ ಆಟಗಾರ ಯುಎಇ ವಿಮಾನ ಹತ್ತುವ ಮುನ್ನ ತೆರಳುವ ಮುನ್ನ ಇನ್ನೂ ಮೂರು ಟೆಸ್ಟ್ಗಳಿಗೆ ಒಳಗಾಗಬೇಕಿದೆ ಎಂದು ತಿಳಿದುಬಂದಿದೆ.
ನಾಯರ್ ಬೆಂಗಳೂರಿನಿಂದ ಒಂದು ಸಣ್ಣಗುಂಪಿನ ಜೊತೆ ಚಾರ್ಟರ್ಡ್ ಫ್ಲೈಟ್ನಲ್ಲಿ ದೆಹಲಿಗೆ ಪ್ರಯಾಣಿಸಲಿದ್ದು, ಅಲ್ಲಿ ತಂಡದ ಸದಸ್ಯರನ್ನು ಸೇರಿಕೊಳ್ಳಲಿದ್ದಾರೆ. ಪಂಜಾಬ್ ತಂಡದಲ್ಲಿ ಕರುಣ್ ಜೊತೆಗೆ ಕರ್ನಾಟಕದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಕೆ.ಗೌತಮ್ ಹಾಗೂ ಕೋಚ್ ಅನಿಲ್ ಕುಂಬ್ಳೆ ಇರಲಿದ್ದಾರೆ.
ನಾಯರ್ ಐಪಿಎಲ್ ಅಂಕಿಅಂಶ:
2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರಿಕೊಂಡ ನಾಯರ್, 13 ಪಂದ್ಯಗಳಿಂದ 301 ರನ್ಗಳಿಸಿದ್ದರು. 2019ರ ಆವೃತ್ತಿಯಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶವನ್ನಷ್ಟೇ ಇವರು ಪಡೆದಿದ್ದರು.