ಕೋಲ್ಕತ್ತಾ : ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮಗೆ ಕೋಲ್ಕತ್ತಾ ನೈಟ್ ರೈಡರ್ಸ್ ಟ್ರೋಫಿ ಗೆಲ್ಲುತ್ತೆ ಎಂಬ ಬಲವಾದ ನಂಬಿಕೆಯಿತ್ತು ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.
2012 ಹಾಗೂ 2014ರ ಐಪಿಎಲ್ ಚಾಂಪಿಯನ್ ಆಗಿರುವ ಕೆಕೆಆರ್ 2019ರ ಆವೃತ್ತಿಯಲ್ಲಿ 14 ಪಂದ್ಯಗಳಿಂದ 12 ಅಂಕ ಪಡೆದು ಪ್ಲೇ ಆಫ್ ತಲುಪಲು ವಿಫಲವಾಗಿತ್ತು. 2018ರಲ್ಲಿ ಫ್ಲೇ ಆಫ್ ತಲುಪಿದರೂ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿತ್ತು.
ಈ ಕುರಿತು ಕೆಕೆಆರ್ ಅಧಿಕೃತ ವೆಬ್ಸೈಟ್ಗೆ ಮಾಹಿತಿ ನೀಡಿರುವ ಕುಲ್ದೀಪ್, ಕಳೆದ ವರ್ಷ ನಾವು ಗೆಲ್ಲುತ್ತೇವೆಂಬ ಬಲವಾದ ಭಾವನೆ ನನ್ನಲ್ಲಿತ್ತು. ಅದರಲ್ಲೂ 2018ರಲ್ಲಿ ನಾವು ಅದ್ಭುತ ಕ್ರಿಕೆಟ್ ಆಡಿದ್ದೆವು. ಆದ್ದರಿಂದ ನಾವು ಟ್ರೋಫಿ ಎತ್ತಿ ಹಿಡಿಯುತ್ತೇವೆ ಎಂದು ಭಾವಿಸಿದ್ದೆ ಎಂದಿದ್ದಾರೆ.
11ನೇ ಆವೃತ್ತಿಯ ಕ್ವಾಲಿಫೈಯರ್-2ರಲ್ಲಿ ಸನ್ರೈಸರ್ಸ್ ವಿರುದ್ಧ ಸೋತಿದ್ದು ನನಗೆ ಇನ್ನೂ ನೆನಪಿದೆ. ಆ ಪಂದ್ಯದಲ್ಲಿ ನಾನು ನನ್ನ 4 ಓವರ್ಗಳ ಕೋಟಾ ಮುಗಿಸಿ ಮೈದಾನದಿಂದ ಹೊರ ಬಂದಿದ್ದೆ. ಆಗ ಅವರು 125 ರನ್ಗಳಿಸಿದ್ದರು. ಅವರು 145 ರೊಳಗಿರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ರಶೀದ್ ಖಾನ್ ಬ್ಯಾಟಿಂಗ್ ಬಂದು ಪಂದ್ಯದ ಗತಿಯನ್ನೇ ಬದಲಿಸಿದರು. ನಾವು ಫೈನಲ್ ತಲುಪುವಲ್ಲಿ ಒಂದು ಹಂತದಲ್ಲಿ ಎಡವಿದೆವು ಎಂದಿದ್ದಾರೆ.
ಆ ಸೋಲು ನನ್ನಪಾಲಿಗೆ ಹೃದಯ ವಿದ್ರಾವಕ ಕ್ಷಣವಾಗಿತ್ತು ಎಂದಿರುವ ಅವರು, ನಾವು ಉತ್ತಮ ಕಾಂಬಿನೇಷನ್ ಪಡೆದು ಕೊಂಡರೆ ಖಂಡಿತವಾಗಿಯೂ ಈ ವರ್ಷ ಪ್ರಶಸ್ತಿ ಗೆಲ್ಲಬಹುದು. ಇದೆಲ್ಲವನ್ನು ಬದಿಗೊತ್ತಿದರೆ ಇದು ಕ್ರಿಕೆಟ್, ನಾವೂ ಆದಷ್ಟು ಬೇಗ ಅಥವಾ ತಡವಾಗಿಯಾದರೂ ಗೆಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.
2020ರ ಐಪಿಎಲ್ ಯುಎಇನಲ್ಲಿ ಆಯೋಜನೆಗೊಂಡಿದೆ. ಮೊದಲ ಪಂದ್ಯ ಸೆಪ್ಟೆಂಬರ್ 19ರಂದು ನಡೆಯಲಿದೆ. ನವೆಂಬರ್ 10 ರಂದು ಫೈನಲ್ ಪಂದ್ಯ ಜರುಗಲಿದೆ.