ಮೈಸೂರು: ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾಟದಲ್ಲಿ ಸ್ಟಾಲಿನ್ ಹೂವರ್ (108 ನಾಟೌಟ್) ವೇಗದ ಶತಕದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡ ಶಿವಮೊಗ್ಗ ಲಯನ್ಸ್ ವಿರುದ್ಧ 9 ವಿಕೆಟ್ಗಳ ಜಯ ಗಳಿಸಿತು.
176 ರನ್ ಜಯದ ಗುರಿ ಹೊತ್ತ ಪ್ಯಾಂಥರ್ಸ್ ತಂಡ ಮನೀಶ್ ಪಾಂಡೆ (53 ನಾಟೌಟ್) ಹಾಗೂ ಹೂವರ್ ಸ್ಫೋಟಕ ಆಟದ ನೆರವಿನಿಂದ ಇನ್ನೂ 5.2 ಓವರ್ ಬಾಕಿ ಇರುವಾಗಲೇ ಜಯದ ಗುರಿ ತಲುಪಿತು. ಸ್ಟಾಲಿನ್ ಹೂವರ್ 44 ಎಸೆತಗಳಲ್ಲಿ 100 ರನ್ ಗಳಿಸಿ ಕೆಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ಸಿಡಿಸಿದ ಎರಡನೇ ಆಟಗಾರರೆನಿಸಿದರು.
ಎರಡು ದಿನಗಳ ಹಿಂದೆಯಷ್ಟೇ ಪ್ಯಾಂಥರ್ಸ್ ತಂಡದ ಕೆ.ಗೌತಮ್ 39 ಎಸೆತಗಳಲ್ಲಿ ವೇಗದ ಶತಕ ದಾಖಲಿಸಿದ್ದರು. ಇದಕ್ಕೂ ಮುನ್ನ ಮನೀಶ್ ಪಾಂಡೆ 49 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದು, ಮಯಾಂಕ್ ಅಗರ್ವಾಲ್ 45 ಎಸೆತಗಳಲ್ಲಿ ನೂರು ರನ್ ಗಳಿಸಿ ದಾಖಲೆ ಬರೆದಿದ್ದರು. ಇದೀಗ ಸ್ಟಾಲಿನ್ ಹೂವರ್ 50 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ಅಜೇಯ 108 ರನ್ ಗಳಿಸುವ ಮೂಲಕ ಜಯದ ರೂವಾರಿ ಎನಿಸಿದ್ದಾರೆ. ಇನ್ನು ತಂಡದ ಮನೀಶ್ ಪಾಂಡೆ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 53 ರನ್ ಸಿಡಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರೆ, ಕೆ.ಗೌತಮ್ ಬ್ಯಾಟಿಂಗ್ ಅಬ್ಬರ ಲಯನ್ಸ್ ಬೌಲರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪ್ಯಾಂಥರ್ಸ್ ಪಡೆಯ ನಿಹಾಲ್ ಉಲ್ಲಾಳ್ (4) ರನ್ ಪಡೆದರೆ, ನಾಯಕ ಅಭಿಮನ್ಯು ಮಿಥುನ್ 17 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 22 ರನ್ ಸಿಡಿಸಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿ ಲಯನ್ಸ್ ತಂಡದ ದರ್ಶನ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ಲಯನ್ಸ್ ಸವಾಲಿನ ಮೊತ್ತ:
ಶಿವಮೊಗ್ಗ ಲಯನ್ಸ್ ತಂಡ ಅರ್ಜುನ್ ಹೊಯ್ಸಳ (77) ಹಾಗೂ ಪವನ್ ದೇಶಪಾಂಡೆ (59) ಆಕರ್ಷಕ ಅರ್ಧ ಶತಕದ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಕರ್ನಾಟಕ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ 175 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು.
ಮೂರನೇ ವಿಕೆಟ್ ಜತೆಯಾಟದಲ್ಲಿ ಅರ್ಜುನ್ ಹೊಯ್ಸಳ ಹಾಗೂ ಪವನ್ ದೇಶಪಾಂಡೆ 106 ರನ್ ಜತೆಯಾಟ ಆಡುವುದರೊಂದಿಗೆ ಬೃಹತ್ ಮೊತ್ತದತ್ತ ಲಯನ್ಸ್ ದಾಪುಗಾಲು ಹಾಕಿತು. ಪವನ್ ದೇಶಪಾಂಡೆ 35 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 59 ರನ್ಗಳ ಉತ್ತಮ ಕೊಡುಗೆ ನೀಡಿದರು. ಅರ್ಜುನ್ ಹೊಯ್ಸಳ ಸ್ಫೋಟಕ ಬ್ಯಾಟಿಂಗ್ನಲ್ಲಿ 58 ಎಸೆತಕ್ಕೆ 3 ಬೌಂಡರಿ 4 ಸಿಕ್ಸರ್ ಮೂಲಕ ಸವಾಲಿನ ಮೊತ್ತಕ್ಕೆ ನೆರವಾದರು. ಅವಿನಾಶ್ ಡಿ. ಬೆಳಗಾವಿ ತಂಡದ ಮನೀಶ್ ದೇಶಪಾಂಡೆ ವಿಕೆಟ್ ಪಡೆಯುವಲ್ಲಿ ಸಫಲರಾಗಿ ಉತ್ತಮ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಅವಿನಾಶ್ ಡಿ. 35 ರನ್ಗೆ 3 ವಿಕೆಟ್ ಗಳಿಸಿದರೆ, ದರ್ಶನ್ 1 ವಿಕೆಟ್ಗೆ ತೃಪ್ತರಾದರು.