ಪುಣೆ: ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ನಾಯಕನಾಗುವ ಮೂಲಕ ಭಾರತ ತಂಡವನ್ನು 200 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ ಕೀರ್ತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ 60 ಟೆಸ್ಟ್ , 95 ಏಕದಿನ ಮತ್ತು 45 ಟಿ20 ಪಂದ್ಯಗಳಲ್ಲಿ ನಾಯಕನಾಗಿದ್ದಾರೆ. ಈ ಪಂದ್ಯವನ್ನು ಹೊರತುಪಡಿಸಿದರೆ, ಕೊಹ್ಲಿ ನಾಯಕನಾಗಿರುವ 199 ಪಂದ್ಯಗಳಲ್ಲಿ 127 ರಲ್ಲಿ ಗೆಲುವು ತಂದುಕೊಟ್ಟಿದ್ದರೆ, 55 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. 3 ಪಂದ್ಯಗಳು ಟೈ ಆಗಿದ್ದರೆ 10 ಪಂದ್ಯಗಳು ಫಲಿತಾಂಶ ರಹಿತವಾಗಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕನಾಗಿರುವ ದಾಖಲೆ ಭಾರತದ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. ಧೋನಿ 332 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 324, ನ್ಯೂಜಿಲ್ಯಾಂಡ್ನ ಸ್ಟೀಫನ್ ಫ್ಲೆಮಿಂಗ್ 303, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 286, ಆಸ್ಟ್ರೇಲಿಯಾದ ಅಲೆನ್ ಬಾರ್ಡರ್ 271 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ.
ಭಾರತದ ಪರ ಎಂ ಎಸ್ ಧೋನಿ, ಕೊಹ್ಲಿ ಹೊರತುಪಡಿಸಿದರೆ ಮೊಹಮ್ಮದ್ ಅಜರುದ್ದೀನ್ (221) ಮಾತ್ರ 200ಕ್ಕೂ ಹೆಚ್ಚು ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಸೌರವ್ ಗಂಗೂಲಿ ಭಾರತ ತಂಡವನ್ನು 195 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ.
ಇದನ್ನು ಓದಿ:ಏಕದಿನ ಕ್ರಿಕೆಟ್ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ರೋಹಿತ್-ಧವನ್ ಜೋಡಿ