ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಯ್ಕೆ ಮಾಡುತ್ತಿದ್ದಂತೆ 1983 ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕ್ರಿಕೆಟ್ ಸಲಹಾ ಸಮಿತಿಗೆ ರಾಜೀನಾಮೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಬಿಸಿಸಿಐ ನೈತಿಕ ಅಧಿಕಾರಿ ಡಿಕೆ ಜೈನ್ ಅವರಿಂದ ಹಿತಾಸಕ್ತಿ ಸಂಘರ್ಷ ಕುರಿತು ನೋಟಿಸ್ ಜಾರಿಯಾಗುತ್ತಿದ್ದಂತೆ ಕಪಿಲ್ ದೇವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ತಿಳಿದು ಬಂದಿದೆ.
ಕ್ರಿಕೆಟ್ ಸಲಹಾ ಸಮಿತಿ ಕಮಿಟಿಯಲ್ಲಿದ್ದ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ಹಿತಾಸಕ್ತಿ ಸಂಘರ್ಷ ಸಂಬಂಧಿ ನೋಟಿಸ್ ನೀಡಲಾಗಿದ್ದು, ಈಗಾಗಲೇ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಪಿಲ್ ಏನು ಹೇಳಿದ್ರು?
ಕ್ರಿಕೆಟ್ ಸಲಹಾ ಸಮಿತಿಯಲ್ಲಿ ಪುರುಷ ತಂಡದ ಮುಖ್ಯ ಕೋಚ್ ಆಯ್ಕೆ ಮಾಡುವ ಅವಕಾಶ ನೀಡಿದ್ದಕ್ಕೆ ನನಗೆ ಹೆಮ್ಮೆ ಇದೆ. ತಕ್ಷಣದಿಂದಲೇ ಜಾರಿಯಾಗುವಂತೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಪಿಲ್ ತಿಳಿಸಿದ್ದು, ಸಿಒಎ ಮುಖ್ಯಸ್ಥ ವಿನೋದ್ ರಾಯ್, ಬಿಸಿಸಿಐ ಮುಖ್ಯಸ್ಥ ರಾಹುಲ್ ಜೋಹ್ರಿ ಅವರಿಗೆ ಇ-ಮೇಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನೋಟಿಸ್ ಜಾರಿ ಮಾಡಲು ಕಾರಣವಿಷ್ಟು:
ಕಪಿಲ್ ದೇವ್ ಫ್ಲಡ್ಲೈಟ್ ಕಂಪನಿ ಮಾಲೀಕರಾಗಿದ್ದು, ಇದರ ಜತೆಗೆ ಇಂಡಿಯನ್ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಕ್ರಿಕೆಟ್ ಸಲಹಾ ಸಮಿತಿ ಮಂಡಳಿಯಲ್ಲಿ ಸದಸ್ಯರಾಗಿದ್ದರಿಂದ ಅವರಿಗೆ ಹಿತಾಸಕ್ತಿ ಸಂಘರ್ಷ ಕುರಿತು ನೋಟಿಸ್ ಜಾರಿ ಮಾಡಲಾಗಿತ್ತು.